ಸಂವಿಧಾನ ಪೀಠದಲ್ಲಿ ಕಾಶ್ಮೀರ ಅರ್ಜಿ ವಿಚಾರಣೆ – ಕೇಂದ್ರಕ್ಕೆ ನೋಟಿಸ್

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳ ವಿಚಾರಣೆ 5 ಮಂದಿ ನ್ಯಾಯಾಧೀಶರ ಸಂವಿಧಾನಿಕ ಪೀಠದಲ್ಲಿ ನಡೆಯಲಿದೆ.

ಮುಖ್ಯ ನ್ಯಾ. ರಂಜನ್ ಗೊಗೋಯ್, ನ್ಯಾ. ಎಸ್‍ಎ ಬೊಬ್ಡೆ, ಎಸ್ ಅಬ್ದುಲ್ ನಜೀರ್ ಅವರಿದ್ದ ಪೀಠದಲ್ಲಿ ಇಂದು ಕೇಂದ್ರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಯಿತು. ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಇದು ಬಹಳ ಸೂಕ್ಷ್ಮ ವಿಚಾರ ಎಂದು ಕೋರ್ಟ್ ಗಮನಕ್ಕೆ ತಂದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಇಂದು ನಾವು ಯಾವುದೇ ಆದೇಶ ಪ್ರಕಟಿಸುವುದಿಲ್ಲ. ಎಲ್ಲ ಅರ್ಜಿಗಳನ್ನು ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗುವುದು. ಅಕ್ಟೋಬರ್ ಮೊದಲ ವಾರದಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದೆ ಎಂದು ಹೇಳಿದರು.

ಕಾಶ್ಮೀರ ಟೈಮ್ಸ್ ಪತ್ರಿಕೆಯ ಸಂಪಾದಕಿ ಅನುರಾಧ ಬಸ್ಸಿನ್ ಕಾಶ್ಮೀರದಲ್ಲಿ ಹೇರಲಾಗಿರುವ ಸಂವಹನ ನಿರ್ಬಂಧವನ್ನು ಕೂಡಲೇ ತೆಗೆದು ಹಾಕಬೇಕು. ನಿರ್ಬಂಧ ಹೇರಿದ್ದರಿಂದ ಮಾಧ್ಯಮಗಳು ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಮನವಿ ಮಾಡಿದ್ದ ಅರ್ಜಿಯ ವಿಚಾರಣೆಯೂ ನಡೆಯಿತು. ನಂತರ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ 7 ದಿನಗಳ ಒಳಗಡೆ ಉತ್ತರಿಸಬೇಕು ಎಂದು ಸೂಚಿಸಿತು.

ಕೇಂದ್ರ ಸರ್ಕಾರ ಭದ್ರತೆಗಾಗಿ  50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಿದೆ. ಕಾಶ್ಮೀರದ  400ಕ್ಕೂ ಹೆಚ್ಚು ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.  ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಗೃಹ ಬಂಧನದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *