– ಸಮೀಕ್ಷೆಯೂ ಒಂದು ಗೊಂದಲದ ಗೂಡು; ಪರಿಷತ್ ವಿಪಕ್ಷ ನಾಯಕ ಕಿಡಿ
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ. ಈ ಆಯೋಗವನ್ನು ಆಯೋಗದಲ್ಲಿ ಇರುವವರೇ ನಡೆಸುತ್ತಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ (Caste Census Survey) ಸಂಬಂಧಿಸಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇನ್ನೂ 15 ಜಾತಿಗಳಿಗೆ ಕ್ರೈಸ್ತ ಟ್ಯಾಗ್ ನೀಡಿರುವುದನ್ನು ರದ್ದು ಮಾಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸೋಮವಾರ ಪ್ರಾರಂಭವಾಗಿದೆ. ಈ ಸಮೀಕ್ಷೆ ಒಂದು ಗೊಂದಲದ ಗೂಡು. ಇದು ಹಿಂದುತ್ವ ವಿರೋಧ ನೀತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸರ್ಕಾರ ಮಾಡ್ತಿರೋ ಜಾತಿ ಗಣತಿ ನಾವು ಒಪ್ಪಲ್ಲ: ಸಿ.ಸಿ. ಪಾಟೀಲ್
ಗೊಂದಲ ಪರಿಹರಿಸಲು ಕೋರಿ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ. ಬ್ರಾಹ್ಮಣ ಕ್ರೈಸ್ತರು, ಲಿಂಗಾಯತ ಕ್ರೈಸ್ತರು, ಒಕ್ಕಲಿಗ, ವೀರಶೈವ ಮೊದಲಾದ ಎಲ್ಲರನ್ನೂ ಕ್ರೈಸ್ತ ಎಂದು ಹೆಸರಿಸಿದ್ದಾರೆ. ಹೊಲೆಯ, ಮಾದಿಗ, ಬಂಜಾರ ಕ್ರೈಸ್ತ, ಬೋವಿ ಕ್ರೈಸ್ತ ಎಲ್ಲವನ್ನೂ ಸೇರಿಸಿದ್ದರು ಎಂದಿದ್ದಾರೆ.
ಎಲ್ಲಾ ಜಾತಿಗಳಿಂದ ಕ್ರೈಸ್ತ ಕಾಲಂಗಳನ್ನು ಕೈಬಿಟ್ಟಿಲ್ಲ
ಹೋರಾಟಗಳು ನಡೆದು ಪ್ರಭಾವಿ ಸಮುದಾಯಗಳು ಹೋರಾಟಕ್ಕೆ ಇಳಿದಾಗ ಅವುಗಳನ್ನು ಕಾಣದಂತೆ ಹೈಡ್ ಮಾಡಿದ್ದಾಗಿ ಹೇಳಿದ್ದರು. ಆದರೆ, ಪರಿಶಿಷ್ಟ ವರ್ಗಗಳಿಗೆ ಸೇರಿದ್ದನ್ನು ಹೈಡ್ ಮಾಡಿಲ್ಲ. ಇದರಿಂದ ಗೊಂದಲವಾಗಿದೆ. ಎಲ್ಲಾ ಜಾತಿಗಳಿಂದ ಕ್ರೈಸ್ತ ಕಾಲಂಗಳನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ ಎಂದು ದೂರಿದ್ದಾರೆ.
ದಲಿತರು ಕ್ರೈಸ್ತರಾಗಿ ಸೇರಿದರೆ ಅವರನ್ನು ದಲಿತರೆಂದು ಪರಿಗಣಿಸಲಾಗುವುದಿಲ್ಲ. ಇಲ್ಲಿ ಗೊಂದಲವಿದೆ. ಮತಾಂತರ ಆದವರ ಜಾತಿ ನೋಡದಿರಿ. ಇದೇರೀತಿ ಮುಂದುವರೆಸಿ ಮನೆಗಳಿಗೆ ಬರುವುದಾದರೆ, ನೀವು ಒಂದೇ ಒಂದು ಬರಹವನ್ನೂ ಬರೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಜನರು ಬಿಡುವುದಿಲ್ಲ ಎಂದಿದ್ದಾರೆ.
ಸದಾಶಿವ ಆಯೋಗ, ನಾಗಮೋಹನ್ ದಾಸ್ ಆಯೋಗ, ಕಾಂತರಾಜು ಆಯೋಗ, ಜಯಪ್ರಕಾಶ್ ಹೆಗ್ಡೆ ಆಯೋಗದಲ್ಲಿ ಪರಿಶಿಷ್ಟ ಜಾತಿಗೆ ಕ್ರಿಶ್ಚಿಯನ್ ಪದ ಇರಲಿಲ್ಲ. ಈಗ ಯಾಕೆ ಹುಟ್ಟಿದೆ? ಇಂದು ಸಭೆ ಕರೆದು ತೀರ್ಮಾನ ಮಾಡುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ. ಇಂದೇ ತೀರ್ಮಾನ ಆಗದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಆಯೋಗವೇ ಹೊಣೆ ಎಂದು ಹೇಳಿದ್ದಾರೆ.
ಈ ವಿಚಾರ ಮಾತನಾಡುವಾಗ ವಾದವಿವಾದವೂ ಆಗಿದೆ. ಜನರಲ್ಲಿ ನೋವಿದೆ. ಕ್ರಿಶ್ಚಿಯನ್ ಧರ್ಮ ಸೇರ್ಪಡೆಗೆ ವಿರೋಧ ಇಲ್ಲ. ಆಯೋಗವು ದಲ್ಲಾಳಿ ಕೆಲಸ ಮಾಡುತ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ.
