ಇಪ್ಪತ್ತು ದಿನದಲ್ಲಿ ಸಿಇಟಿ ಫಲಿತಾಂಶ: ಅಶ್ವಥ್ ನಾರಾಯಣ್

ಬೆಂಗಳೂರು: ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದ್ದು, 20 ದಿನದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿ, ಈ ತಿಂಗಳ 30ಕ್ಕೆ ಪರೀಕ್ಷೆ ಮುಗಿಯುತ್ತದೆ. ಹೀಗಾಗಿ ಕ್ಷಿಪ್ರಗತಿಯಲ್ಲಿ ಫಲಿತಾಂಶ ನೀಡಲು ಕ್ರಮ ವಹಿಸಲಾಗಿದೆ. 20 ದಿನಗಳಲ್ಲಿ ರಿಸಲ್ಟ್ ಪ್ರಕಟಿಸಲಾಗುವುದು. ಅಕ್ಟೋಬರ್‌ನಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದರು.

ರಾಜ್ಯದ 530 ಕೇಂದ್ರ ಸೇರಿ ಬೆಂಗಳೂರಿನ 86 ಕೇಂದ್ರಗಳಲ್ಲೂ ಪರೀಕ್ಷೆ ಉತ್ತಮವಾಗಿ ನಡೆಯುತ್ತಿದೆ. ಯಾವುದೇ ಸಮಸ್ಯೆ ಇಲ್ಲ. ಕೋವಿಡ್ ನಿಯಮಗಳಿಗೊಳಪಟ್ಟೇ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗೆ 2,01,816 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಕೋವಿಡ್ ಪಾಸಿಟಿವ್ ಇರುವ 12 ವಿದ್ಯಾರ್ಥಿಗಳ ಪೈಕಿ 4ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಬಂದಿದೆ. ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಸಲಾಗಿದೆ ಎಂದು ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು. ಇದನ್ನೂ ಓದಿ:  ಕಾಲೇಜಿಗೆಂದು ಹೋದ ವಿದ್ಯಾರ್ಥಿನಿ ಶವವಾಗಿ ಪತ್ತೆ

ಜಿಲ್ಲಾ ಕೇಂದ್ರಗಳಿಂದ ಮಾಹಿತಿ ಬಂದಿದ್ದು, ಯಾವುದೇ ಸಮಸ್ಯೆ ಆಗಿಲ್ಲ. ಕೇರಳದ ಗಡಿ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮತ್ತು ವೀಕೆಂಡ್ ಕರ್ಫ್ಯೂ ಇದ್ದರೂ ಆ ಜಿಲ್ಲೆಗಳಲ್ಲೂ ತೊಂದರೆ ಉಂಟಾಗಿಲ್ಲ. ಮುಖ್ಯವಾಗಿ ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ಸಾಗಿದೆ ಎಂದು ಅವರು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *