ನಮಸ್ತೆ ಟ್ರಂಪ್‍ಗೆ 100 ಕೋಟಿ ಖರ್ಚು ಮಾಡ್ತಾರೆ, ಆದ್ರೆ ಕಾರ್ಮಿಕರಿಗೆ ಟಿಕೆಟ್ ಹಣ ಕೇಳ್ತಾರೆ: ಪ್ರಿಯಾಂಕಾ ಗಾಂಧಿ

ನವದೆಹಲಿ: ವಲಸೆ ಕಾರ್ಮಿಕರಿಂದ ರೈಲು ಪ್ರಯಾಣದ ಟಿಕೆಟ್‍ಗೆ ಶುಲ್ಕ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಳಿಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೋನಿಯಾ ಗಾಂಧಿ ಅವರ ಮಾಧ್ಯಮ ಹೇಳಿಕೆಗೆ ಟ್ಯಾಗ್ ಮಾಡಿ ಸರಣಿ ಟ್ವಿಟ್ ಮಾಡಿರುವ ಪ್ರಿಯಾಂಕಾ, ವಿದೇಶಗಳಿಂದ ನೂರಾರು ಎನ್‌ಆರ್‌ಐಗಳನ್ನು ಉಚಿತವಾಗಿ ಕರೆತರಲಾಗುತ್ತೆ. ಹಾಗೆಯೇ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಖಜಾನೆಯಿಂದ ನೂರು ಕೋಟಿ ಖರ್ಚು ಮಾಡುವ ಸರ್ಕಾರ, ವಲಸೆ ಕಾರ್ಮಿಕರಿಂದ ರೈಲು ಪ್ರಯಾಣದ ಹಣ ವಸೂಲಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ನೀಡುತ್ತೆ: ಸೋನಿಯಾ ಗಾಂಧಿ

ಉದ್ಯೋಗವಿಲ್ಲದೇ ಕಾರ್ಮಿಕರು ತತ್ತರಿಸಿದ್ದಾರೆ. ದೇಶ ಕಟ್ಟುವ ಕಾರ್ಮಿಕರಿಂದ ಹಣ ಕೀಳುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದಿದ್ದಾರೆ. ಪಿಎಂ ಕೇರ್ಸ್‍ಗೆ 150 ಕೋಟಿ ದೇಣಿಗೆ ನೀಡಿರುವ ರೈಲ್ವೆ ಇಲಾಖೆ ಕಾರ್ಮಿಕರಿಗೆ ಉಚಿತ ಪ್ರಮಾಣ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜ್ಯ ಕಾಂಗ್ರೆಸ್ ಘಟಕಗಳಿಂದ ಹಣ ಪಾವತಿಗೆ ಮುಂದಾಗಿರುವುದನ್ನು ಪ್ರಿಯಾಂಕಾ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಉಚಿತ ಬಸ್ ಸಂಚಾರಕ್ಕಾಗಿ 1 ಕೋಟಿ ದೇಣಿಗೆ ಕೊಟ್ಟ ಕೆಪಿಸಿಸಿ

ಈ ಹಿಂದೆ ದೇಶದ ವಿವಿಧ ರಾಜ್ಯಗಳಿಂದ ತಮ್ಮ ಊರುಗಳಿಗೆ ಹೋಗುತ್ತಿರುವ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸುವುದು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದರು.

ಈ ಬಗ್ಗೆ ಸೋನಿಯಾ ಗಾಂಧಿ ಅವರು ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆದೇಶ ಹೊರಡಿಸಿದ್ದು, ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ವಾಪಸ್ ಹೋಗಲು ರೈಲ್ವೆ ಪ್ರಯಾಣದ ವೆಚ್ಚವನ್ನು ಭರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು.

ಈ ಸಮಯದಲ್ಲಿ ಕಾರ್ಮಿಕರ ನೆರವಿಗೆ ನಿಲ್ಲಬೇಕಾಗಿದೆ. ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಪ್ರಜೆಗಳನ್ನು ಭಾರತಕ್ಕೆ ಕರೆತರಲು ಸರ್ಕಾರ ಆಸಕ್ತಿ ತೋರುತ್ತದೆ. ಆದರೆ ನಮ್ಮ ದೇಶದಲ್ಲಿರುವ ಬಡ, ನಿರ್ಗತಿಕ ವಲಸೆ ಕಾರ್ಮಿಕರ ಬಗ್ಗೆ ಯಾಕೆ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದರು.

ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ರೈಲಿನಲ್ಲಿ ಉಚಿತವಾಗಿ ಅವರ ಊರುಗಳಿಗೆ ಕಳುಹಿಸಿ ಎಂದು ಕಾಂಗ್ರೆಸ್ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮತ್ತು ರೈಲ್ವೆ ಸಚಿವಾಲಯಗಳಿಗೆ ಮನವಿ ಮಾಡಿದೆ. ಆದರೂ ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದರು.

Comments

Leave a Reply

Your email address will not be published. Required fields are marked *