ಅಂಬೇಡ್ಕರ್‌ ಜಯಂತಿ: ಏ.14 ರಂದು ಸಾರ್ವತ್ರಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ

– ಬಾಬಾ ಸಾಹೇಬರ ಕಟ್ಟಾ ಅನುಯಾಯಿ ಪ್ರಧಾನಿ ಮೋದಿ ಅವರ ನಿರ್ಧಾರ ಇದು: ಕೇಂದ್ರ ಸಚಿವ ಪೋಸ್ಟ್

ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ (Dr. B.R.Ambedkar) ಅವರು ಹುಟ್ಟಿದ ದಿನ ಏ.14 ರಂದು ಭಾರತದಾದ್ಯಂತ ಕೇಂದ್ರದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಅಂಬೇಡ್ಕರರ ಜಯಂತಿ ದಿನದಂದು ಇನ್ಮುಂದೆ ರಾಷ್ಟ್ರೀಯ ರಜೆ ಇರಲಿದೆ.

ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಈ ಘೋಷಣೆ ಮಾಡಿದ್ದಾರೆ. ‘ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ಸ್ಥಾಪಿಸಿದ ಸಂವಿಧಾನ ಶಿಲ್ಪಿ, ನಮ್ಮ ಬಾಬಾ ಸಾಹೇಬ್ ಪೂಜ್ಯ ಡಾ. ಭೀಮರಾವ್ ಅಂಬೇಡ್ಕರ್ ಜಿ ಅವರ ಜನ್ಮ ವಾರ್ಷಿಕೋತ್ಸವದಂದು ಈಗ ಸಾರ್ವಜನಿಕ ರಜೆ ಇರುತ್ತದೆ. ಬಾಬಾ ಸಾಹೇಬರ ಕಟ್ಟಾ ಅನುಯಾಯಿ, ಗೌರವಾನ್ವಿತ ಪ್ರಧಾನಿ ಜಿ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ರಾಷ್ಟ್ರದ ಭಾವನೆಗಳನ್ನು ಗೌರವಿಸಿದ್ದಾರೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ಸಿಬಿಐ ವರದಿ

ಭಾರತದಾದ್ಯಂತ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಏಪ್ರಿಲ್ 14 ರ ಸೋಮವಾರದಂದು ಮುಚ್ಚಲಿವೆ. ಈ ನಿರ್ಧಾರದ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ತಿಳಿಸಲು ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚಿಸಲಾಗಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಎಂದೇ ಜನಪ್ರಿಯರಾಗಿರುವ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು 1891 ರ ಏಪ್ರಿಲ್ 14 ರಂದು ಮಧ್ಯಪ್ರದೇಶದ ಮಾವ್‌ನಲ್ಲಿ ಜನಿಸಿದರು. ಸಾಮಾಜಿಕ ತಾರತಮ್ಯದ ವಿರುದ್ಧದ ಹೋರಾಟದಲ್ಲಿ ಪ್ರವರ್ತಕ ನಾಯಕರಾಗಿ ಗುರುತಿಸಿಕೊಂಡ ಅಂಬೇಡ್ಕರ್‌, ತಮ್ಮ ಇಡೀ ಜೀವನವನ್ನು ತುಳಿತಕ್ಕೊಳಗಾದ ಸಮುದಾಯಗಳ, ವಿಶೇಷವಾಗಿ ದಲಿತರ ಹಕ್ಕುಗಳಿಗಾಗಿ ಮುಡಿಪಾಗಿಟ್ಟರು.

ಅಂಬೇಡ್ಕರ್ ಅವರು ಭಾರತೀಯ ಸಂವಿಧಾನ ರಚನೆಗೆ ನೀಡಿದ ಮಹತ್ವದ ಕೊಡುಗೆಯೊಂದಿಗೆ ಆಧುನಿಕ ಭಾರತವನ್ನು ರೂಪಿಸಿದರು. ಅರ್ಥಶಾಸ್ತ್ರಜ್ಞರು, ವಿದ್ವಾಂಸರು ಮತ್ತು ದೇಶದ ಮೊದಲ ಕಾನೂನು ಮತ್ತು ನ್ಯಾಯ ಸಚಿವರಾಗಿದ್ದರು. ಅವರ ಕೊಡುಗೆಗಳು ಭಾರತದ ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದವು. ಒಂಬತ್ತು ಭಾಷೆಗಳನ್ನು ಮಾತನಾಡುವ ಬಹುಭಾಷಾ ಪಂಡಿತರಾಗಿದ್ದ ಅಂಬೇಡ್ಕರ್ ಶಿಕ್ಷಣ ಮತ್ತು ಆಡಳಿತದ ಮೇಲೆ ಪ್ರಭಾವ ಬೀರಿದ್ದರು. ಇದನ್ನೂ ಓದಿ: ಕೇತಗಾನಹಳ್ಳಿ‌ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ; ಹೆಚ್‌ಡಿಕೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದ ಸುಪ್ರೀಂ