ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ – ಪ್ರತಿ ಕ್ವಿಂಟಲ್‌ಗೆ 1,616 ರೂ. ದರ ನಿಗದಿ

– 2.5 ಲಕ್ಷ ಟನ್ ಮಾವು ಖರೀದಿಗೆ ಬೆಂಬಲ ಬೆಲೆ ಘೋಷಣೆ
– ಮಾವು ಬೆಳೆಗಾರರ ನರೆವಿಗೆ ಬರುವಂತೆ ಪತ್ರ ಬರೆದಿದ್ದ ಹೆಚ್‌ಡಿಕೆ

ನವದೆಹಲಿ: ಮಾವು ಬೆಳೆಗಾರರ ನೆರವಿಗೆ ಬರುವಂತೆ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪತ್ರ ಬರೆದು ಮನವಿ ಮಾಡಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ (Central Government) ಬೆಂಬಲ ಬೆಲೆ ಘೋಷಿಸಿ, ಖರೀದಿಗೆ ಬೆಲೆ ನಿಗದಿ ಮಾಡಿದೆ.

ಈ ಮೂಲಕ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ 1,616 ರೂ. ದರ ನಿಗದಿ ಮಾಡಿದ್ದು, 2.5 ಲಕ್ಷ ಟನ್ ಮಾವು ಖರೀದಿಸಲು ನಿರ್ಧರಿಸಿದೆ. ತಮ್ಮ ಪತ್ರವನ್ನು ಆಧರಿಸಿ ತಕ್ಷಣವೇ ಸ್ಪಂದಿಸಿದಕ್ಕಾಗಿ ಕೇಂದ್ರಕ್ಕೆ ಹೆಚ್‌ಡಿಕೆ ಧನ್ಯವಾದ ತಿಳಿಸಿದ್ದಾರೆ.ಇದನ್ನೂ ಓದಿ: ಕೇಂದ್ರ ಕೃಷಿ ಸಚಿವರಿಗೆ ಹೆಚ್‌ಡಿಕೆ ಪತ್ರ – ಮಾವು ಬೆಳೆಗಾರರ ನೆರವಿಗೆ ಬರುವಂತೆ ಮನವಿ

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮಾವು ಬೆಳೆಗಾರರ ನೆರವಿಗೆ ಧಾವಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರ ರೈತಪರ ಬದ್ಧತೆ, ಅಚಲತೆಗೆ ಹೃದಯಪೂರ್ವಕ ಧನ್ಯವಾದಗಳು. ರಾಜ್ಯದ ಮಾವು ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದರು. ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮನವಿ ಮಾಡಿಕೊಂಡಿದ್ದೆ. ನನ್ನ ಮನವಿಗೆ ಸ್ಪಂದಿಸಿ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ ಅಡಿಯಲ್ಲಿ ತಕ್ಷಣ ಬೆಂಬಲ ಬೆಲೆ ಘೋಷಿಸಿದ್ದೀರಿ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕರ್ನಾಟಕದ ಮಾವು ಬೆಳೆಗಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

ಇದಕ್ಕೂ ಮುನ್ನ ಹೆಚ್‌ಡಿಕೆ ಅವರು ಪತ್ರದ ಮೂಲಕ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು. ಪತ್ರದ ಮೂಲಕ, ಕೇಂದ್ರ ಸರ್ಕಾರ ನೆರವಿಗೆ ಬಾರದಿದ್ದರೆ ಬೆಳೆಗಾರರಿಗೆ ಬೇರೆ ನೆರವಿನ ಖಾತರಿ ಇಲ್ಲ. ನಫೆಡ್ ಮತ್ತು ಎನ್‌ಸಿಸಿಎಫ್ ಮೂಲಕ ಮಾವು ಖರೀದಿ ಮಾಡಬೇಕು ಹಾಗೂ ತಕ್ಷಣವೇ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಕರ್ನಾಟಕದ ಗ್ರಾಮೀಣ ಭಾಗದ ಮಾವು ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಬೆಲೆ ಸಿಗದ ಕಾರಣ ಮಾವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಇಂತಹ ಕಷ್ಟಕಾಲದಲ್ಲಿ ತಾವು ರೈತರ ನೆರವಿಗೆ ಧಾವಿಸಬೇಕು ಎಂದು ಕೋರಿದ್ದರು.

ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದೆ. ಮಾವನ್ನು ರಾಜ್ಯದಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಹೆಚ್ಚಾಗಿ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರಬಿ ಋತುವಿನಲ್ಲಿ ಅಂದಾಜು 8ರಿಂದ 10 ಲಕ್ಷ ಟನ್ ಮಾವು ಈ ಜಿಲ್ಲೆಗಳಲ್ಲಿ ಬೆಳೆಯಲ್ಪಡುತ್ತದೆ. ದುರಾದೃಷ್ಟದ ಸಂಗತಿ ಎಂದರೆ, ಹವಾಮಾನ ವೈಪರೀತ್ಯದಿಂದ ರೋಗರುಜಿನಗಳು ತಗುಲಿ ಪ್ರಸಕ್ತ ವರ್ಷದಲ್ಲಿ ಮಾವಿನ ಇಳುವರಿ ಶೇ.30ರಷ್ಟು ಕಡಿಮೆಯಾಗಿದೆ ಎಂಬ ಅಂಶವನ್ನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದರು.ಇದನ್ನೂ ಓದಿ: ಸಿದ್ದರಾಮಯ್ಯನವರೇ ತಪ್ಪಿಯೂ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ, ಮಾರಿಕೊಂಡು ಹೋಗ್ತಾರೆ – ಯತ್ನಾಳ್