ತುರ್ತು ಶಸ್ತ್ರಾಸ್ತ್ರ ಖರೀದಿಗೆ ಸೇನೆಗೆ ಅಧಿಕಾರ – ಮೋದಿ ಸರ್ಕಾರದ ಮಹತ್ವದ ನಿರ್ಧಾರ

ನವದೆಹಲಿ: ಒಂದು ಕಡೆ ಚೀನಾ ಯುದ್ಧೋನ್ಮಾದ ಸ್ಥಿತಿಯಲ್ಲಿದೆ. ಮತ್ತೊಂದೆಡೆ ಜಮ್ಮು-ಕಾಶ್ಮೀರದಲ್ಲಿ ಅಮರನಾಥ ಯಾತ್ರಿಗಳ ಹತ್ಯೆ ನಡೆದಿದೆ. ಪಾಕಿಸ್ತಾನ ಗಡಿಯಲ್ಲೂ ವಾತಾವರಣ ಕಾವೇರಿದೆ. ಇಂಥ ಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ತುರ್ತು ಶಸ್ತ್ರಾಸ್ತ್ರಗಳ ಖರೀದಿಗೆ ಕೇಂದ್ರ ಸರ್ಕಾರ ಸೇನೆಗೆ ಅಧಿಕಾರ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.

ಫಿರಂಗಿಗಳು, ಟ್ಯಾಂಕ್ ಶೆಲ್‍ಗಳು, ಫ್ಯೂಸ್‍ಗಳು ಹಾಗೂ ಶಸ್ತ್ರಾಸ್ತ್ರಗಳ ಬಿಡಿ ಭಾಗಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಳೆದ ವರ್ಷ ಉರಿಯಲ್ಲಿ ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ನಡೆಸಿದ ನಂತರ ಶಸ್ತ್ರಾಸ್ತ್ರಗಳ ಕೊರತೆ ಉಂಟಾಗಿತ್ತು. ಸೇನೆಯ ಯುದ್ಧ ಸನ್ನದ್ಧತೆಯ ಬಗ್ಗೆ ಆಂತರಿಕ ಪರಿಶೀಲನೆ ನಡೆದಿತ್ತು. ಇದಾದ 10 ದಿನಗಳ ಬಳಿಕ ಭಾರತೀಯ ಸೇನೆ ಗಡಿ ನಿಯಂತ್ರಣಾ ರೇಖೆಯನ್ನು ದಾಟಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರೂ, 15 ದಿನಗಳ ಕಿರು ಯುದ್ಧ ನಡೆಸಲು ಸೇನೆ ಸನ್ನದ್ಧವಾಗಿರಲು ಕೊರತೆಯಿರುವುದು ಆಂತರಿಕ ಪರಿಶೀಲನೆಯಿಂದ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಹಲವು ಶಸ್ತ್ರಾಸ್ತ್ರಗಳ ಬಿಡಿ ಭಾಗಗಳನ್ನ ಖರೀದಿಸಲು ಸರ್ಕಾರ ಸೇನೆಗೆ ಅಧಿಕಾರ ನೀಡಿದೆ. ಈ ಮೂಲಕ ಭಾರತ ಯುದ್ಧ ಸನ್ನದ್ಧವಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಸೇನೆಯು 46 ರೀತಿಯ ಯುದ್ಧಸಾಮಗ್ರಿ, 10 ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನ ಗುರುತಿಸಿದೆ. ಈ ಎಲ್ಲಾ ಯುದ್ಧ ಪರಿಕರಗಳನ್ನ ತುರ್ತು ಖರೀದಿ ಮಾರ್ಗದಲ್ಲಿ ಖರೀದಿಸಬಹುದಾಗಿದೆ. ಉಪ ಸೇನಾ ಮುಖ್ಯಸ್ಥರಿಗೆ ಹಣಕಾಸು ಪರಮಾಧಿಕಾರ ಕೊಟ್ಟು ಮೋದಿ ಸರ್ಕಾರ ಆದೇಶ ನೀಡಿದೆ. ಇದರಿಂದಾಗಿ 40 ಸಾವಿರ ಕೋಟಿ ರೂಪಾಯಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಸ್ವತಃ ಉಪ ಸೇನಾ ಮುಖ್ಯಸ್ಥರೇ ಆದೇಶ ನೀಡಬಹುದಾಗಿದೆ.

ಈ ಅಧಿಕಸೂಚನೆಯಿಂದಾಗಿ ಸೇನೆಯು ರಕ್ಷಣಾ ಸ್ವಾಧೀನ ಮಂಡಳಿ ಅಥವಾ ಭದ್ರತಾ ಸಂಪುಟ ಸಮಿತಿಯ ಮೂಲಕ ಹೋಗಬೇಕಿಲ್ಲ. ತುರ್ತು ಖರೀದಿ ವರ್ಗದ ಅಡಿಯಲ್ಲಿ ಎಲ್ಲಾ ಖರೀದಿಯು ಉಪ ಸೇನಾ ಮುಖ್ಯಸ್ಥರ ಕಚೇರಿಯಲ್ಲೇ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ವಾಯು ಪಡೆ ಹಾಗೂ ನೌಕಾ ಪಡೆಗೂ ಕೂಡ ಶೀಘ್ರದಲ್ಲೇ ಇದೇ ರೀತಿಯ ಅಧಿಕಾರ ನೀಡಬಹುದು ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಇದ್ದಂತೆ ಶಸ್ತ್ರಾಸ್ತ್ರಗಳ ಖರೀದಿಗೆ ಖರ್ಚಿನ ಮಿತಿಯಿಲ್ಲ. ಸದ್ಯಕ್ಕೆ ಸೇನೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನೆಲ್ಲಾ ಖರೀದಿಸಬಹುದು. ಇದೊಂದು ಪ್ರಮುಖ ಬದಲಾವಣೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾರ್ಚ್ 31ರವರೆಗೆ ಸೇನೆಯು ಶಸ್ತ್ರಾಸ್ತ್ರಗಳ ತುರ್ತು ಖರೀದಿ ಮಾಡಲು ಅಧಿಕಾರ ನೀಡಲಾಗಿದೆ.

Comments

Leave a Reply

Your email address will not be published. Required fields are marked *