ಅಭಿವೃದ್ಧಿ ಎಲ್ಲಿ ಆಗಿದೆ: ಕೇಂದ್ರದ ವಿರುದ್ಧ ಮನಮೋಹನ್ ಸಿಂಗ್ ಗರಂ

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಎಲ್ಲಾ ರಂಗದಲ್ಲು ವಿಫಲವಾಗಿದೆ. ಅಭಿವೃದ್ಧಿ ಅಂತ ಹೇಳುತ್ತೆ ಆದ್ರೆ ಎಲ್ಲಿಯು ಅಭಿವೃದ್ಧಿ ಕಾಣುತ್ತಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಆರ್ಥಿಕ ನೀತಿಗಳು ಸಾಮಾನ್ಯ ಜನರ ಮೇಲೆ ಹೆಚ್ಚು ಪರಿಣಾಮಗಳನ್ನು ಬೀರುತ್ತದೆ. ಕೇಂದ್ರದ ನೋಟು ನಿಷೇಧ ಮತ್ತು ಜಿಎಸ್‍ಟಿ ಅನುಷ್ಠಾನದಲ್ಲಿ ಆಗಿರುವ ನ್ಯೂನತೆಗಳಿಂದ ಜನರು ಹೆಚ್ಚು ಸಮಸ್ಯೆಗೀಡಾಗಿದ್ದಾರೆ. ಸಾವಿರಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ನಿರ್ಧಾರದಿಂದ ಮಧ್ಯಮ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳು ಅವನತಿಯತ್ತ ಹೋಗಿವೆ. ನಮ್ಮ ಸರ್ಕಾರ ಇದ್ದಾಗ ಪೆಟ್ರೋಲ್ ದರ ತುಂಬ ಕಡಿಮೆಯಿತ್ತು. ಇವತ್ತು ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದೆ. ಹೆಚ್ಚು ತೆರಿಗೆಯನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರ ದೇಶದ ಜನರಿಗೆ ಉತ್ತರಿಸಬೇಕಾಗಿದೆ ಎಂದು ಕಿಡಿಕಾರಿದರು.

ಕಳೆದ 4 ವರ್ಷಗಳಿಂದ ಮೋದಿಯವರು ಕಾಂಗ್ರೆಸ್ ಸರ್ಕಾರವನ್ನ ತೆಗಳುವ ಕೆಲಸ ಬಿಟ್ರೆ ಬೇರೆನೂ ಮಾಡಿಲ್ಲ. ದೇಶದ ಕೃಷಿ ಬೆಳವಣಿಗೆಗೆ ಒತ್ತು ನೀಡದೇ ಇರುವುದರಿಂದ ಆ ಕ್ಷೇತ್ರದ ಬೆಳವಣಿಗೆ ಹಿನ್ನೆಡೆ ಕಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಯುವಕರ ಸಂಖ್ಯೆ ಜಾಸ್ತಿ ಇದೆ, ದೇಶದ ಸ್ಟಾರ್ಟ್ ಅಪ್ ಕ್ಯಾಪಿಟಲ್. ಟೆಂಡರ್ ಶ್ಯೂರ್ ರಸ್ತೆಗಳು ಪ್ರಪಂಚದಲ್ಲಿಯೇ ಹೆಸರು ಮಾಡಿದೆ. ಮೆಟ್ರೊಗಾಗಿ ಹೆಚ್ಚಿನ ಅನುದಾನವನ್ನ ರಾಜ್ಯ ಸರ್ಕಾರ ನೀಡಿದೆ. ಸಿದ್ದರಾಮಯ್ಯ ಸರ್ಕಾರ ಸಾಕಷ್ಟು ಕೈಗಾರಿಕೆಗಳು ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಒತ್ತು ನೀಡಿದೆ. ಗುಜರಾತ್‍ಗಿಂತ ಕೈಗಾರಿಕೆಗಳ ಸ್ಥಾಪನೆಯಲ್ಲಿ ಕರ್ನಾಟಕ ಮುಂದೆ ಇದೆ. ಉದ್ಯೋಗ ಸೃಷ್ಟಿಯಲ್ಲೂ ಸಹ ದೇಶಕ್ಕೆ ಬೆಂಗಳೂರು ಮಾದರಿಯಾಗಿದೆ. ನಾವು ಮಾಡಿರುವ ಒಳ್ಳೆಯ ಕೆಲಸಗಳು ಬಿಜೆಪಿಯವರ ಕಣ್ಣಿಗೆ ಕಂಡಿಲ್ಲ ಎಂದು ಲೇವಡಿಮಾಡಿದರು.

Comments

Leave a Reply

Your email address will not be published. Required fields are marked *