ಕೇಂದ್ರದಿಂದ ಒಂದೇ ಸಲ ಪರಿಹಾರ ಹಣ ಬಿಡುಗಡೆ ಮಾಡ್ತೀವಿ- ಅನಂತಕುಮಾರ್ ಹೆಗಡೆ

ಕಾರವಾರ: ಕೇಂದ್ರದಿಂದ ಒಂದೇ ಸಲ ಪರಿಹಾರ ಹಣವನ್ನು ಬಿಡುಗಡೆ ಮಾಡುತ್ತೇವೆ. ರಾಜ್ಯ ಸರ್ಕಾರ ಹಾನಿಯ ಸಮೀಕ್ಷೆಯ ಅಂದಾಜನ್ನು ಕಳಿಸಿದ ತಕ್ಷಣ ಕೇಂದ್ರದಿಂದ ಪರಿಹಾರ ಧನ ಬಿಡುಗಡೆಯಾಗುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗೆಡೆ ಭರವಸೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವಿಲ್ಲ ಅನ್ನೋದು ಸುಳ್ಳು. ಮುಖ್ಯಮಂತ್ರಿಗಳು ಒಬ್ಬರೇ ಇದ್ರೂ ಕೂಡ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ. ಇಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲೂ ರಾಜಕೀಯ ಮಾಡೋ ಜಾಯಮಾನ ನಮ್ಮದಲ್ಲ ಎಂದರು.

ರಾಜ್ಯ ಹಿಂದೆಂದೂ ಕಾಣದ ನೆರೆಹಾವಳಿಯನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಮಂತ್ರಿ ಮಂಡಲದ ರಾಜಕೀಯ ಕೆಸರೆರಚಾಟ ಸರಿಯಲ್ಲ. ಸಚಿವರಾರೂ ಇಲ್ಲದಿದ್ದರೂ ಮುಖ್ಯಮಂತ್ರಿ ಒಬ್ಬರೇ ಎಲ್ಲ ಭಾಗಗಳಿಗೂ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ಒಬ್ಬರೇ ಇದ್ದರೂ ಸರ್ಕಾರ ತುಂಬಾ ಸಮರ್ಥವಾಗಿದೆ. ಮುಖ್ಯಮಂತ್ರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲು ಜನರ ಕಷ್ಟ ಪರಿಹಾರವಾಗಬೇಕು. ಬೇರೆ ಬೇರೆ ಕಾರಣಕ್ಕೆ ಸಂಪುಟ ರಚನೆ ಸಾಧ್ಯವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ತುಂಬಾ ಲಿಬರಲ್ ಇದೆ ಎಂದು ತಿಳಿಸಿದರು.

ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ, ಮನೆ ಅರ್ಧ ಹಾಳಾಗಿದ್ದಲ್ಲಿ ರಿಪೇರಿಗೆ 1 ಲಕ್ಷ ರೂ. ಹಾಗೂ ಮನೆಗೆ ನೀರು ನುಗ್ಗಿದ್ದಲ್ಲಿ 3800 ರೂ. ಪರಿಹಾರ ಧನವನ್ನು ತಕ್ಷಣಕ್ಕೆ ಘೋಷಿಸಿದ್ದು, ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ. ಮಳೆಯಿಂದಾಗಿ ಇನ್ನು ಮುಂದೆಯೂ ಮನೆಗಳು ಹಾನಿಗೊಳಗಾಗುವ ಸಂದರ್ಭವಿದ್ದು, ಅದನ್ನು ಕೂಡ ಪಟ್ಟಿ ಮಾಡಿ ಅವರಿಗೂ ಪರಿಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಅನಂತ ಕುಮಾರ್ ಹೆಗಡೆ ಅವರು ಇಂದು ಮಳೆಯಿಂದ ಹಾನಿಗೊಳಗಾದ ಸಿದ್ದಾಪುರದ ನೆರೆಪೀಡಿತ ಹೆಮ್ಮನಬೈಲ್, ಅಕ್ಕುಂಜಿ, ಕಲ್ಯಾಣಪುರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Comments

Leave a Reply

Your email address will not be published. Required fields are marked *