ಅವಧಿಗೂ ಮುನ್ನವೇ ಕರ್ನಾಟಕ ರಾಜ್ಯಪಾಲರ ಬದಲಾವಣೆಗೆ ಬಿಜೆಪಿ ಪ್ಲಾನ್!

ಬೆಂಗಳೂರು: ಕರ್ನಾಟಕದ ರಾಜ್ಯಪಾಲರ ಬದಲಾವಣೆಗೆ ಬಿಜೆಪಿ ಚಿಂತಿಸುತ್ತಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಲೋಕಸಮರದ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಬೀಳಲಿದೆ ಎಂಬ ಭವಿಷ್ಯವನ್ನು ಬಿಜೆಪಿ ನಾಯಕರು ಹೇಳಿಕೊಂಡು ಬರುತ್ತಿದ್ದಾರೆ. ಇತ್ತ ಮೈತ್ರಿ ನಾಯಕರು ಸಹ ಅತೃಪ್ತರನ್ನು ಉಳಿಸಿಕೊಳ್ಳಲು ಸಂಪುಟ ಪುನಾರಚನೆಯ ಮೊರೆ ಹೋಗಿದ್ದು, ಕೈ ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಸದ್ಯ ಕರ್ನಾಟಕದ ರಾಜ್ಯಪಾರಾಗಿರುವ ವಜೂಬಾಯ್ ವಾಲಾರನ್ನು ಬದಲಿಸಲು ಕೇಂದ್ರ ಮಟ್ಟದಲ್ಲಿ ಚಿಂತನೆಗಳು ನಡೆದಿವೆ ಎನ್ನಲಾಗುತ್ತಿದೆ.

ಬದಲಾವಣೆ ಯಾಕೆ?
2014ರ ಸೆಪ್ಟೆಂಬರ್ 1ರಂದು ರಾಜ್ಯಪಾಲರಾಗಿ ವಜೂಬಾಯ್ ವಾಲಾ ನೇಮಕವಾಗಿದ್ದರು. ಈ ಸೆಪ್ಟೆಂಬರ್ ಗೆ ವಜೂಬಾಯ್ ವಾಲಾ ಅವರ ಅವಧಿ ಅಂತ್ಯವಾಗಲಿದೆ. ಒ0ದು ವೇಳೆ ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆದು ಮೈತ್ರಿ ಸರ್ಕಾರ ಬಿದ್ದರೆ, ಖಡಕ್ ನಿರ್ಧಾರ ತೆಗೆದುಕೊಳ್ಳಲು ಖಡಕ್ ವ್ಯಕ್ತಿಯೇ ಬೇಕು ಎಂಬ ಚರ್ಚೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿವೆ. ವಜೂಬಾಯ್ ವಾಲಾ ಸೌಮ್ಯ ಸ್ವಭಾವದ ನಾಯಕ ಆಗಿದ್ದರಿಂದ ರಾಜ್ಯಪಾಲರ ಬದಲಾವಣೆಯ ಮಾತುಗಳು ಚರ್ಚೆ ಆಗುತ್ತಿದೆ.

ಕರ್ನಾಟಕದಂತೆ ಮಧ್ಯ ಪ್ರದೇಶದ ರಾಜ್ಯಪಾಲರನ್ನು ಬದಲಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. ವಜೂಬಾಯ್ ವಾಲಾರ ಬದಲಾಗಿ ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ಅವರನ್ನು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ. ಜೂನ್ ಮೂರನೇ ವಾರದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರಗಳು ಹೊರ ಬೀಳಲಿದ್ದು, ರಾಜ್ಯದ ಮೈತ್ರಿ ಸರ್ಕಾರ ಬೀಳುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

Comments

Leave a Reply

Your email address will not be published. Required fields are marked *