ಕೇಂದ್ರದಿಂದ ರಾಜ್ಯಕ್ಕೆ ಮಹಾಮೋಸ- ಸಬ್ ಅರ್ಬನ್ ರೈಲು ಯೋಜನೆಗೆ ಕೊಟ್ಟಿದ್ದು 1 ಕೋಟಿ ಮಾತ್ರ

ನವದೆಹಲಿ: ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಪ್ರತಿ ಬಾರಿ ತಾರತಮ್ಯ ಮಾಡುವ ಕೇಂದ್ರ ಸರ್ಕಾರವು ಈ ಬಾರಿ ಬಜೆಟ್‍ನಲ್ಲೂ ಮಲಧೋರಣೆ ತಾಳಿದೆ. 18,618 ಕೋಟಿ ರೂ. ವೆಚ್ಚದಲ್ಲಿ ಸಬ್ ಅರ್ಬನ್ ರೈಲು ಯೋಜನೆ ಅನುಷ್ಠಾನಗೊಳಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಪಿಂಕ್‍ಬುಕ್‍ನಲ್ಲಿ ಈ ಯೋಜನೆಗೆ ಕೇವಲ 1 ಕೋಟಿ ಮೊತ್ತವನ್ನು ಮೀಸಲಿಟ್ಟಿದೆ.

ಸಬ್ ಅರ್ಬನ್ ರೈಲು ಯೋಜನೆ ಆರಂಭಕ್ಕಾಗಿ ಕೇಂದ್ರ ರಾಜ್ಯ ಸರ್ಕಾರ 20+20 ಹಾಗೂ ಖಾಸಗಿ ಬ್ಯಾಂಕುಗಳ ಸಹಭಾಗಿತ್ವದಲ್ಲಿ ಶೇ. 60 ಹೂಡಿಕೆ ಮಾಡಬೇಕಿದೆ. ಈ ಪೈಕಿ ಕೇಂದ್ರ ಸರ್ಕಾರದಿಂದ ಶೇ. 20 ಅಂದರೆ ಅಂದಾಜು ಮೂರೂವರೆ ಸಾವಿರ ಕೋಟಿ ರೂ. ಕಾಮಗಾರಿಗೆ ನೀಡಬೇಕಿತ್ತು. ಆದರೆ ಅನುದಾನ ಘೋಷಿಸಿದ್ದ ಕೇಂದ್ರ ಪಿಂಕ್ ಬುಕ್‍ನಲ್ಲಿ ಒಂದು ಕೋಟಿ ನೀಡಿದ್ದು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಕೇಂದ್ರ ಸರ್ಕಾರದ ಈ ನಿಲುವಿನಿಂದ ಬೆಂಗಳೂರಿನ ಬಹುದಿನಗಳ ಕನಸು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: 7 ವರ್ಷದಿಂದ ಕನ್ನಡಿಗರ ಮೂಗಿಗೆ ತುಪ್ಪ- ಅನುಷ್ಠಾನಕ್ಕೆ ಬರಲೇ ಇಲ್ಲ ಕೋಲಾರ ರೈಲ್ವೇ ಕೋಚ್ ಫ್ಯಾಕ್ಟರಿ

ಪ್ರಸ್ತುತ ವರ್ಷದಲ್ಲಿ ಬಜೆಟ್‍ನಲ್ಲಿ ಕನಿಷ್ಠ 500 ಕೋಟಿ ರೂಪಾಯಿಯಾದ್ರು ನೀಡಬೇಕಿದ್ದ ಸರ್ಕಾರ ಕೇವಲ ಯೋಜನೆ ಘೋಷಿಸಿ ಹಣ ನೀಡದೆ ವಂಚನೆ ಮಾಡಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಸದ್ಯ ಒಂದು ಕೋಟಿ ರೂ. ನೀಡಿದ್ದು ಡಿಪಿಆರ್ ಬಳಿಕ ಅನುದಾನ ನೀಡುವ ಭರವಸೆಯನ್ನು ಕೇಂದ್ರದ ಅಧಿಕಾರಿಗಳು ನೀಡುತ್ತಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರ ಯೋಜನೆ ಆರಂಭಿದರೆ ಕೇಂದ್ರ ಸರ್ಕಾರ ಬಳಿಕ ಅನುದಾನ ನೀಡಲಿದೆ ಎಂದು ಕೆಲ ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *