ದೇಶದಲ್ಲಿ 24 ಲಕ್ಷ ಉದ್ಯೋಗ ಖಾಲಿ – ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ ಇದೆ? ಇಲ್ಲಿದೆ ಮಾಹಿತಿ

ನವದೆಹಲಿ: ಉದ್ಯೋಗ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿಂತೆ ದೇಶಾದ್ಯಂತ ಕುರಿತು ಭಾರೀ ಚರ್ಚೆ ಹಾಗೂ ಪ್ರತಿಭಟನೆಗಳು ನಡೆಯುತ್ತಿದ್ದು, ಇದೇ ವೇಳೆ ಕೇಂದ್ರಾಡಳಿತ ಪ್ರದೇಶ, ಕೇಂದ್ರ, ರಾಜ್ಯ ಸರ್ಕಾರದಲ್ಲಿ ಒಟ್ಟು 24 ಲಕ್ಷ ಉದ್ಯೋಗಗಳು ಖಾಲಿ ಇರುವ ವಿಚಾರ ಬೆಳಕಿಗೆ ಬಂದಿದೆ.

ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ವಿವಿಧ ದಿನಾಂಕಗಳಲ್ಲಿ ಇಲಾಖೆವಾರು ಉದ್ಯೋಗ ಸೃಷ್ಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಮುಖವಾಗಿ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ನೇಮಕವಾಗಬೇಕಿದೆ. ಇದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ 9 ಲಕ್ಷ ಇದ್ದರೆ, ಸೆಕೆಂಡರಿ ಶಾಲೆಯ 1.1 ಲಕ್ಷ ಹುದ್ದೆ ಖಾಲಿಯಿದೆ.

ಮಾರ್ಚ್ 27 ರಂದು ಲೋಕಸಭೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಕುರಿತು ಉತ್ತರಿಸಿ, ನಾಗರಿಕ ಜಿಲ್ಲಾ ಸಶಸ್ತ್ರ ಪಡೆಯಲ್ಲಿ 4.4 ಲಕ್ಷ ಹುದ್ದೆಗಳು ಖಾಲಿ ಉಳಿದಿದೆ. ಅಲ್ಲದೇ ರಾಜ್ಯ ಸಶಸ್ತ್ರ ಪೊಲೀಸ್ ಪಡೆಯಲ್ಲಿ 90,000 ಹುದ್ದೆಗಳು ಖಾಲಿ ಉಳಿದಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಈ ಹುದ್ದೆಗಳನ್ನು ಆಯಾ ರಾಜ್ಯ ಸರ್ಕಾರಗಳು ಭರ್ತಿ ಮಾಡಬೇಕಿದೆ.

ರಾಜ್ಯ ಸಭೆಯಲ್ಲಿ ಮಾರ್ಚ್ 14 ಹಾಗೂ 19 ಮತ್ತು ಲೋಕಸಭೆಯಲ್ಲಿ ಏಪ್ರಿಲ್ 4 ರಂದು ಕೇಳಲಾದ ಪ್ರಶ್ನೆಯ ವೇಳೆ ರಕ್ಷಣಾ ಕ್ಷೇತ್ರದಲ್ಲಿ 1.2 ಲಕ್ಷ ಹುದ್ದೆಗಳು ಖಾಲಿ ಉಳಿದಿದೆ ಎಂಬ ಅಂಕಿ ಅಂಶಗಳನ್ನ ನೀಡಲಾಗಿದೆ. ದೇಶದ ಬಹುದೊಡ್ಡ ಸಂಖ್ಯೆಯಲ್ಲಿ ಉದ್ಯೋಗವಕಾಶ ನೀಡಿರುವ ರೈಲ್ವೇ ಇಲಾಖೆ ಕುರಿತು ಮಾರ್ಚ್ 16 ರಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನ್ ಗೆಜೆಟೆಡ್ ಹುದ್ದೆಗಳು 2.5 ಲಕ್ಷ ಹುದ್ದೆ ಖಾಲಿ ಉಳಿದಿದೆ ಎಂಬ ವರದಿ ಸಲ್ಲಿಕೆಯಾಗಿದೆ. ಇದೇ ವೇಳೆ ನೀಡಲಾದ ಮಾಹಿತಿಯಲ್ಲಿ ಫೆಬ್ರವರಿ ವೇಳೆಗೆ 89,000 ಹುದ್ದೆಗಳ ನೇಮಕಾತಿಗೆ ಆದೇಶ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಪೋಸ್ಟಲ್ ಇಲಾಖೆಯಲ್ಲಿ ಮಾರ್ಚ್ 28 ರಂದು ಸದನಕ್ಕೆ ನೀಡಿರುವ ಮಾಹಿತಿ ಅನ್ವಯ 54 ಸಾವಿರ ಹುದ್ದೆಗಳು ಖಾಲಿ ಇದೆ. ಇನ್ನು ರಾಜ್ಯಸಭೆಯಲ್ಲಿ ಫೆ.6 ರಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ ಆರೋಗ್ಯ ಇಲಾಖೆಯಲ್ಲಿ 1.5 ಲಕ್ಷ ಹುದ್ದೆ ಖಾಲಿ ಇದ್ದು, ಪ್ರಮುಖವಾಗಿ 16 ಸಾವಿರ ವೈದ್ಯರ ನೇಮಕವಾಗಬೇಕಿದೆ.

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ?
ಶಿಕ್ಷಣ ಕ್ಷೇತ್ರ – 10.1 ಲಕ್ಷ
ಪೊಲೀಸ್ ಇಲಾಖೆ – 5.4 ಲಕ್ಷ
ರೈಲ್ವೇ ಇಲಾಖೆ – 2.4 ಲಕ್ಷ
ಅಂಗನವಾಡಿ – 2.2 ಲಕ್ಷ
ಆರೋಗ್ಯ ಇಲಾಖೆ – 1.5 ಲಕ್ಷ
ಸಶಸ್ತ್ರ ಮೀಸಲು ಪಡೆ – 62,084
ಪ್ಯಾರಾ ಮಿಲಿಟರಿ ಪಡೆ – 61,509
ಪೋಸ್ಟಲ್ ಇಲಾಖೆ – 54,263
ಏಮ್ಸ್ – 21,740
ಉನ್ನತ ಶಿಕ್ಷಣ ಸಂಸ್ಥೆ – 12,020
ನ್ಯಾಯಾಲಯ – 5,853

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *