ಯದುವೀರ್ ಒಡೆಯರ್ ಗೆ ಗಂಡು ಮಗು- ಪ್ರವಾಸಿಗರಿಗೆ ಮೈಸೂರ್ ಪಾಕ್ ನೀಡಿ ಜನರ ಸಂಭ್ರಮಾಚರಣೆ

ಮೈಸೂರು: ಮಹಾರಾಜ ಯದುವೀರ್ ಹಾಗೂ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದೆ.

ದಶಕಗಳಿಂದ ಮೈಸೂರಿನ ಯದುವಂಶದಲ್ಲಿ ಮಕ್ಕಳಾಗಿಲ್ಲ ಎಂಬ ಗುಂಗಿನಲ್ಲಿದ್ದ ಜನ, ಸೋಮವಾರ ರಾತ್ರಿ ಪುಟ್ಟ ಯುವರಾಜನ ಜನನದ ಸುದ್ದಿ ಕೇಳಿ ಸಂಭ್ರಮದಲ್ಲಿದ್ದಾರೆ. ಅರಮನೆಯ ದ್ವಾರದ ಎದುರು ಸುರ್‍ಸುರ್ ಬತ್ತಿ ಹಚ್ಚಿ, ಪ್ರವಾಸಿಗರಿಗೆ ಮೈಸೂರು ಪಾಕ್ ನೀಡಿ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇದಲ್ಲದೇ ರಾಜಾಧಿರಾಜ, ಮೈಸೂರಿಗೆ ಯುವರಾಜ ಎಂಬ ಘೋಷಣೆ ಕೂಗುವ ಮೂಲಕ ಸಂತಸಪಟ್ಟಿದ್ದಾರೆ.

ಕೆ.ಆರ್.ವೃತ್ತದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಕುಣಿದು ಕುಪ್ಪಳಿಸಿದ್ರು. ಇದೇ ವೇಳೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಅಲ್ಲದೇ ಒಂದು ಕೆ.ಜಿ ಸಕ್ಕರೆ ಪ್ಯಾಕ್ ಮೇಲೆ ಯದುವೀರ್ ಹಾಗೂ ತ್ರಿಷಿಕಾ ಅವರ ಭಾವ ಚಿತ್ರಗಳನ್ನು ಅಂಟಿಸಿ ಶುಭ ಕೋರಲಾಯಿತು.

ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನೋವಿನ ಹಿನ್ನಲೆಯಲ್ಲಿ ತ್ರಿಷಿಕಾರನ್ನು ಖಾಸಗಿ ಆಸ್ಪತ್ರೆಯಲ್ಲಿ ಕರೆತರಲಾಗಿತ್ತು. ಬುಧವಾರ ರಾತ್ರಿ 9.50 ಕ್ಕೆ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದರು. ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗು ಜನನವಾಗಿದ್ದು, ಜ್ಯೋತಿಷ್ಯದ ಪ್ರಕಾರ ಶ್ರೀರಾಮನು ಇದೇ ನಕ್ಷತ್ರದಲ್ಲಿ ಹುಟ್ಟಿದ್ದನು ಎನ್ನಲಾಗಿದೆ.

1953ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ನಂತರ ಮೈಸೂರು ರಾಜಮನೆತನದಲ್ಲಿ ಗಂಡು ಸಂತಾನ ಪ್ರಾಪ್ತಿಯಾಗಿರಲಿಲ್ಲ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಯದುವೀರ್ ರನ್ನು ರಾಜಮನೆತನದ ಉತ್ತರಾಧಿಕಾರಿಯನ್ನಾಗಿ ಪ್ರಮೋದಾದೇವಿ ಒಡೆಯರ್ ದತ್ತು ಪಡೆದಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ್ದ ಸಂದರ್ಭದಲ್ಲಿ ಇಡೀ ಮೈಸೂರು ನಗರಕ್ಕೆ ಎತ್ತಿನ ಗಾಡಿಗಳಲ್ಲಿ ಸಿಹಿ ತಿಂಡಿಯನ್ನು ಕೊಂಡೊಯ್ದು ಜನರಿಗೆ ಹಂಚಲಾಗಿತ್ತು.

ಇದನ್ನೂ ಓದಿ: ಮೈಸೂರು ರಾಜರಿಗೆ ಪುತ್ರ ಸಂತಾನ: ಅಲಮೇಲಮ್ಮ ಶಾಪ ವಿಮೋಚನೆ ಆಯ್ತಾ? ಶಾಪ ನೀಡಿದ್ದು ಯಾಕೆ?

 

Comments

Leave a Reply

Your email address will not be published. Required fields are marked *