ದೇಶಾದ್ಯಂತ 71ನೇ ಗಣರಾಜ್ಯೋತ್ಸವ ಸಂಭ್ರಮ- ರಾಜ್‍ಪಥ್‍ನಲ್ಲಿ ಪರೇಡ್ ವೀಕ್ಷಿಸಲಿದ್ದಾರೆ ಬ್ರೆಜಿಲ್ ಅಧ್ಯಕ್ಷ

ನವದೆಹಲಿ: ಭಯೋತ್ಪಾದನೆಯ ಭೀತಿ, ಸಿಎಎ ಹೋರಾಟದ ನಡುವೆ ಇಂದು 71ನೇ ಗಣರಾಜ್ಯೋತ್ಸವ ಆಚರಣೆಗೆ ಇಡೀ ದೇಶವೇ ಸಿದ್ಧಗೊಂಡಿದೆ. ದೆಹಲಿ ಸೇರಿ ವಿವಿಧ ಭಾಗಗಳಲ್ಲಿ ಹಲವು ಕಾರ್ಯಕ್ರಮಗಳು ಜರುಗಲಿದೆ.

ಜನವರಿ 26 ಭಾರತೀಯರ ಪಾಲಿಗೆ ಮಹತ್ವದ ದಿನ. ದೇಶ ಸ್ವಾತಂತ್ರ್ಯ ಗಳಿಸಿದ ಬಳಿಕ ನಮ್ಮ ಸಂವಿಧಾನ ಜಾರಿಗೆ ಬಂದ ಸುದಿನವಿದು. ಹಾಗಾಗಿ 71ನೇ ಗಣರಾಜೋತ್ಸವವನ್ನು ಆಚರಣೆಗೆ ಇಡೀ ದೇಶವೇ ಸಜ್ಜಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಕಳೆದೊಂದು ತಿಂಗಳಿಂದ ಸಿದ್ಧತೆ ನಡೆಯುತ್ತಿದ್ದು ಎಲ್ಲದಕ್ಕೂ ಅಂತಿಮ ಸ್ಪರ್ಶ ನೀಡಲಾಗಿದೆ. ಈ ಬಾರಿಯ ಗಣತಂತ್ರ ಹಬ್ಬಕ್ಕೆ ಬ್ರೆಜಿಲ್‍ನ ಅಧ್ಯಕ್ಷ ಜೈರ್ ಬೋಲ್ಸೋನಾರೊ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ.

ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಗಲಿದ್ದು 90 ನಿಮಿಷಗಳ ಕಾಲ ಪರೇಡ್ ನಡೆಯಲಿದೆ. ಪರೇಡ್‍ಗೂ ಮುನ್ನ ಭಾರತೀಯ ಸೇನೆಯಲ್ಲಿ ವಿಶಿಷ್ಠ ಸಾಧನೆ ಮಾಡಿದವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪದಕಗಳನ್ನು ನೀಡಲಿದ್ದಾರೆ.

ಇಂದಿನ ಕಾರ್ಯಕ್ರಮದ ಟೈಮ್ ಲೈನ್:
* ಗಣ್ಯರಿಂದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ನಮನ
* 9:30ಕ್ಕೆ 3 ಸೇನಾ ಮುಖ್ಯಸ್ಥರ ಆಗಮನ
* 9:33ಕ್ಕೆ ರಾಜನಾಥ್ ಸಿಂಗ್, ಪ್ರಧಾನಿ ಮೋದಿ ವಾರ್ ಮೆಮೊರಿಯಲ್‍ಗೆ ಆಗಮನ
* 9:57ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಅತಿಥಿ ಜೈರ್ ಬೋಲ್ಸೋನಾರೊ ವೇದಿಕೆಗೆ ಆಗಮನ

ದೇಶದ ಹಲವೆಡೆ ಉಗ್ರರ ಬಂಧನ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆರವು, ಸಿಎಎ ಜಾರಿ ಹಿನ್ನೆಲೆ ಇಂದು ಪಾತಕ ಕೃತ್ಯಗಳು ನಡೆಯುವ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು ಹೆಚ್ಚಿನ ಭದ್ರತೆ ವಹಿಸಲಾಗಿದೆ.

ರಾಜಪಥ್‍ಗೆ ಹದ್ದಿನಕಣ್ಣು..!
* ರಾಜ್‍ಪಥ್‍ನಿಂದ ಇಂಡಿಯಾ ಗೇಟ್‍ವರೆಗೂ ಅಂದ್ರೆ 8 ಕಿ.ಮೀವರೆಗೂ ಪರೇಡ್ ನಡೆಯಲಿದೆ. ಈ ಪ್ರದೇಶದ 5 ಕಿಮೀ ಸುತ್ತಲೂ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಎತ್ತರದ ಕಟ್ಟಡಗಳ ಮೇಲೆ ಶಾರ್ಪ್ ಶೂಟರ್ ಗಳನ್ನು ನೇಮಕ, ಡ್ರೋನ್ ಕ್ಯಾಮಾರಗಳ ಅಳವಡಿಕೆ ಮಾಡಲಾಗಿದೆ.

ದೆಹಲಿಯಲ್ಲಿ ಒಟ್ಟು 22 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ವೇದಿಕೆ ಸುತ್ತ ಎನ್‍ಎಸ್‍ಜಿ, ಎಸ್‍ಪಿಜಿ, ಐಟಿಬಿಪಿ ಭದ್ರತಾ ಪಡೆ ಗಸ್ತು ಹೊಡೆಯಲಿದೆ. ಸುಲಭ ಸಂಚಾರಕ್ಕೆ 2 ಸಾವಿರ ಟ್ರಾಫಿಕ್ ಪೊಲೀಸರ ನೇಮಕ ಮಾಡಲಾಗಿದೆ. ಒಟ್ಟು 150 ಉನ್ನತ ತಂತ್ರಜ್ಞಾನದ ಸಿಸಿಟಿವಿ ಅಳವಡಿಸಲಾಗಿದೆ. ದೆಹಲಿಯ ಎಲ್ಲಾ ಮೆಟ್ರೋ, ರೈಲು, ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಒಟ್ಟಿನಲ್ಲಿ ರಾಜ್‍ಪಥ್ ಹದ್ದಿನ ಕಣ್ಣಲ್ಲಿ ಇರಲಿದೆ.

ಬಸವಣ್ಣನ ಅನುಭವ ಮಂಟಪ:
ರಾಜ್‍ಪಥ್‍ನಲ್ಲಿ ಈ ಬಾರಿ ಬಸವಣ್ಣನವರ ಕನ್ನಡದ ಕಂಪು ಹರಡಲಿದೆ. ಬಸವಣ್ಣನವರ ಅನುಭವ ಮಂಟಪದ ಸ್ತಬ್ಧಚಿತ್ರ ರಾಜ್ಯವನ್ನು ಪ್ರತಿನಿಧಿಸಲಿದ್ದು, 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ್ದ ಬಸವಣ್ಣನವರ ಪರಿಕಲ್ಪನೆ ಅನಾವರಣಗೊಳ್ಳಲಿದೆ. ಸ್ತಬ್ಧ ಚಿತ್ರದೊಂದಿಗೆ 27 ಕಲಾವಿದರು ಅನುಭವ ಮಂಟಪದ ವಿವಿಧ ಪಾತ್ರಗಳು ಮತ್ತು ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಪರೇಡ್‍ಗೆ ಕನ್ನಡತಿಯ ನೇತೃತ್ವ:
ಎನ್‍ಸಿಸಿ ಪರೇಡ್ ನೇತೃತ್ವವನ್ನು ದಾವಣಗೆರೆಯ ಹರಿಹರ ಮೂಲದ ಎಂ.ಪಿ ಶ್ರೀಷ್ಮಾ ಹೆಗ್ಡೆ ವಹಿಸಿಕೊಂಡಿರುವುದು ಕಾರ್ಯಕ್ರಮದ ಮತ್ತೊಂದು ಆಕರ್ಷಣೆ. ಜೊತೆಗೆ ಭಾರತೀಯ ಸೇನಾ ಶಕ್ತಿಯು ಕೂಡ ರಾಜ್‍ಪಥ್‍ನಲ್ಲಿ ಅನಾವರಣಗೊಳ್ಳಲಿದೆ.

Comments

Leave a Reply

Your email address will not be published. Required fields are marked *