ಅಪಘಾತಕ್ಕೀಡಾಗಿ ಜನಸಂದಣಿ ಇರೋ ನಡುರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ನರಳಾಡಿದ ವೃದ್ಧೆ!

ತಿರುವನಂತಪುರಂ: ಅಪಘಾತಕ್ಕೀಡಾಗಿ ವೃದ್ಧೆಯೊಬ್ಬರು ನಡುರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರೂ, ಯಾರೊಬ್ಬರೂ ಆಕೆಯ ಸಹಾಯಕ್ಕೆ ಬಾರದೆ ಮಾನವೀಯತೆಯನ್ನು ಮರೆತ ಹೀನಾಯ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ಈ ಘಟನೆ ತಿರುವನಂತಪುರದ ಜನಸಂದಣಿ ಹೆಚ್ಚಿರುವ ರಸ್ತೆಯಲ್ಲಿಯೇ ಮಂಗಳವಾರ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ವಿವರ: 65 ವರ್ಷದ ವೃದ್ಧೆಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರು ನಡುರಸ್ತೆಯಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರು. ಜನಸಂದಣಿ ದಟ್ಟವಾಗಿ ಇರುವ ಪ್ರದೇಶವಾಗಿದ್ದರಿಂದ ವಾಹನಗಳು ಸಂಚರಿಸುತ್ತಲೇ ಇದ್ದವು. ಆದ್ರೆ ಯಾರೊಬ್ಬರೂ ತಮ್ಮ ವಾಹನ ನಿಲ್ಲಿಸಿ ವೃದ್ಧೆಯ ಸಹಾಯಕ್ಕೆ ಬರಲಿಲ್ಲ. ಅಲ್ಲದೇ ಪೊಲೀಸರಿಗೂ ಮಾಹಿತಿ ನೀಡಿರಲಿಲ್ಲ. ಘಟನೆ ನಡೆದ ಸ್ಥಳದಲ್ಲಿ ಮೂಕಪ್ರೇಕ್ಷರಂತೆ ಸ್ಥಳೀಯರು ನೆರೆದಿದ್ದರು. ಆದ್ರೂ ಯಾರೂ ವೃದ್ಧೆಗೆ ಸಹಾಯ ಮಾಡುವ ಮನಸ್ಸು ಮಾಡಲಿಲ್ಲ. ಕೊನೆಗೆ ಯುವಕನೊಬ್ಬ ವೃದ್ಧೆಯ ಸಹಾಯಕ್ಕೆ ಧಾವಿಸಿದ್ದಾನೆ. ಅದೇ ಸಮಯದಲ್ಲಿ ಪೊಲೀಸ್ ಕಾರೊಂದು ಅದೇ ಮಾರ್ಗವಾಗಿ ಚಲಿಸಿದ್ದು, ಹೀಗಾಗಿ ಘಟನೆಯನ್ನು ಅರಿತ ಪೊಲೀಸ್ ಮತ್ತು ಯುವಕ ಸೇರಿ ವೃದ್ಧೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಎಲ್ಲಾ ಸನ್ನಿವೇಶಗಳು ಸುಮಾರು 3:25 ಸೆಕೆಂಡ್ ಇರೋ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆಯ ಬಗ್ಗೆ ಪೊಲೀಸರಿಗೆ ಯಾರೊಬ್ಬರೂ ಮಾಹಿತಿ ನೀಡಲಿಲ್ಲ. ಬದಲಾಗಿ ಅವರು ಆ ಮಾರ್ಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಕಂಡು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ವೃದ್ಧೆಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಯುವಕನೊಬ್ಬ ಆಕೆಯ ಸಹಾಯಕ್ಕೆ ಬಂದಿದ್ದನು. ಹೀಗಾಗಿ ಆತನೊಂದಿಗೆ ಸೇರಿ ಪೊಲಿಸರು ವೃದ್ಧೆಯನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವುದಾಗಿ ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 20 ವರ್ಷದ ದ್ವಿಚಕ್ರ ವಾಹನ ಸವಾರನ ಜೊತೆ ಇಬ್ಬರು ಹಿಂಬದಿ ಸವಾರರನ್ನೂ ಬಂಧಿಸಿದ್ದಾರೆ. ಈ ಮೂವರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *