ಮಡಿಕೇರಿ: ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ರಾಡ್‍ನಿಂದ ಹಲ್ಲೆ!

– ಗೂಂಡಾಗಿರಿ ಸಿಸಿಟಿವಿಯಲ್ಲಿ ಸೆರೆ

ಮಡಿಕೇರಿ: ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರೆದಿದ್ದು, ಕ್ಷುಲ್ಲಕ ಕಾರಣಕ್ಕೆ ಗುಂಪು-ಗುಂಪಲ್ಲಿ ತೆರಳಿ ಸಿಕ್ಕವರ ಮೇಲೆ ಹಲ್ಲೆ ಮಾಡೋ ಪ್ರವೃತ್ತಿ ಹೆಚ್ಚಾಗ್ತಿದೆ. ಕಳೆದ ರಾತ್ರಿ ನಗರದ ಮೊಬೈಲ್ ಶಾಪ್‍ವೊಂದಕ್ಕೆ ತೆರಳಿರೋ ಪುಂಡರ ಗುಂಪೊಂದು ಜಗಳ ತೆಗೆದು ಶಾಪ್ ಮಾಲಿಕನಿಗೆ ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಘಟನೆ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನಗರದಲ್ಲಿರುವ ಪಡ್ಡೆ ಹುಡುಗರಿಗೆ ಹೆಸರು ಮಾಡೋ ಹುಚ್ಚು, ದೊಡ್ಡೋರಿಗೆ ಹುಡುಗರನ್ನು ಬೆಳೆಸೋ ಆಸೆ. ಇದರ ಪರಿಣಾಮವೇ ನಗರದಲ್ಲಿ ಚಿಗುರು ಮೀಸೆಯ ಹುಡುಗರೆಲ್ಲಾ ಪುಡಿ ರೌಡಿಗಳಾಗ್ತಿದ್ದಾರೆ. ತಮ್ಮದೇ ಗುಂಪುಗಳನ್ನು ಕಟ್ಕೊಂಡು ಏರಿಯಾ ಹೆಸರಲ್ಲಿ ಹೊಡೆದಾಡ್ಕೊಳ್ತಿದ್ದಾರೆ. ಇಂತಹ ಹೊಡೆದಾಟಕ್ಕೆ ಒಂದು ವಾರದ ಹಿಂದೆ ಒಬ್ಬ ಹರೆಯದ ಹುಡುಗನ ಬರ್ಬರ ಹತ್ಯೆಯೂ ಆಗಿತ್ತು.

ಪುಡಿ ರೌಡಿಗಳ ವಾರ್ ಯಾವಾಗ ಜಾಸ್ತಿ ಆಯ್ತೋ ತಕ್ಷಣ ಪೊಲಿಸ್ರು ಎಚ್ಚೆತ್ತುಕೊಂಡು ಪಡ್ಡೆ ಹುಡುಗ್ರ ಮೇಲೆ ನಿಗಾ ಇಟ್ರು. ಆದ್ರೂ ನಗರದಲ್ಲಿ ದಿನವೂ ಗುಂಪು ಕಟ್ಕೊಂಡು ಹೊಡೆದಾಡೋ ಪ್ರವೃತ್ತಿ ನಿಂತಿಲ್ಲ. ಕಳೆದ ರಾತ್ರಿಯೂ ಅದೇ ಆಗಿದ್ದು, ನಗರ ಕೈಗಾರಿಕಾ ಬಡಾವಣೆಯಲ್ಲಿರೋ ಝೆಡ್ ಮೊಬೈಲ್ ಶಾಪ್‍ಗೆ ಎಂಟ್ರಿ ಕೊಟ್ಟ ನಾಲ್ಕೈದು ಮಂದಿಯ ಪುಡಿ ರೌಡಿಗಳು ಶಾಪ್ ಕ್ಲೋಸ್ ಮಾಡು ಎಂದು ತಗಾದೆ ತೆಗೆದಿದ್ದಾರೆ. ಇದನ್ನು ಅಂಗಡಿ ಮಾಲೀಕ ಜುಬೇರ್ ವಿರೋಧಿಸಿದಾಗ ರಾಡ್‍ನಿಂದ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಾವಳಿ ಶಾಪ್‍ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣಾ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ನಗರದ ಪ್ರಶಾಂತ್ ಹಾಗೂ ಅಭಿಲಾಶ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಪುಡಿ ರೌಡಿಗಳು ಯಾವ ಕಾರಣಕ್ಕೆ ಅಂಗಡಿ ಮಚ್ಚುವಂತೆ ಹೇಳಿದರು ಎಂಬುದು ಮಾತ್ರ ಸದ್ಯ ಗೌಪ್ಯವಾಗಿದ್ದು, ಹಲ್ಲೆಗೆ ನಿಖರ ಕಾರಣ ಮಾತ್ರ ತಿಳಿದುಬಂದಿಲ್ಲ.

https://www.youtube.com/watch?v=6Os2rDOpWg4

Comments

Leave a Reply

Your email address will not be published. Required fields are marked *