ಪಿಸ್ತೂಲ್ ಡೀಲರ್ ಸೆರೆ- ಸಿಸಿಬಿ ಪೊಲೀಸರಿಂದ ಬಂಧನ

ಬೆಂಗಳೂರು: ಪಿಸ್ತೂಲ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಸ್ಲಾಂ ಅಲಿಯಾಸ್ ಹಾವೇರಿ ಅಸ್ಲಾಂ ಬಂಧಿತ ಆರೋಪಿ. ಅಸ್ಲಾಂ ಪಶ್ಚಿಮ ಬಂಗಾಳದಿಂದ ಪಿಸ್ತೂಲ್ ಹಾಗೂ ರಿವಾಲ್ವರ್ ಗಳು ತಂದು ಕರ್ನಾಟಕದ ವಿವಿಧ ನಗರಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

ಹಲವು ವರ್ಷಗಳಿಂದ ಅಸ್ಲಾಂ ಈ ದಂಧೆಯಲ್ಲಿ ತೊಡಗಿದ್ದು, ರೌಡಿಗಳು, ಸೇರಿದಂತೆ ಭೂಗತ ನಂಟಿರುವ ವ್ಯಕ್ತಿಗಳಿಗೆ ಅಕ್ರಮವಾಗಿ ಪಿಸ್ತೂಲ್, ರಿವಾಲ್ವರ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದರ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಮತ್ತೊಬ್ಬ ಡೀಲರ್ ಆಗಿರುವ ಮೈಸೂರು ಮೂಲದ ಜಾವೀದ್ ಎನ್ನುವ ವ್ಯಕ್ತಿ ಕೂಡ ಈ ಡೀಲ್ ಮಾಡುತ್ತಿರುವುದು ಗೊತ್ತಾಗಿದ್ದು, ಜಾವೀದ್‍ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಖಚಿತ ಮಾಹಿತಿ ಆಧಾರದಲ್ಲಿ ಸಿಸಿಬಿ ಪೊಲೀಸರು ಅಸ್ಲಾಂನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ ಎರಡು ಪಿಸ್ತೂಲ್ ಸೇರಿದಂತೆ ಕೆಲವು ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಅಸ್ಲಾಂ ಮತ್ತು ಜಾವೀದ್ ಯಾರಿಗೆಲ್ಲಾ ಮಾರಾಟ ಮಾಡಿದ್ದಾರೆ ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕಿದೆ.

Comments

Leave a Reply

Your email address will not be published. Required fields are marked *