ಸರ್ಕಾರಿ ಕೆಲಸ ಕೊಡ್ಸೋದಾಗಿ ಮೋಸ- ಕಾಂಗ್ರೆಸ್ ನಾಯಕರ ಆಪ್ತ ಸಿಸಿಬಿ ಬಲೆಗೆ

ಬೆಂಗಳೂರು: ಕಾಂಗ್ರೆಸ್ ನಾಯಕರ ಆಪ್ತನೊಬ್ಬ ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿ ಇದೀಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾನೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯ ಮುಂಜುನಾಥ್ ಮೋಸ ಮಾಡಿರೋ ವ್ಯಕ್ತಿ. ಈತನಿಗೆ ಸಿಎಂ ಸಿದ್ದರಾಮಯ್ಯರಿಂದ ಹಿಡಿದು, ನಗರ ಪೊಲೀಸ್ ಆಯುಕ್ತರ ತನಕ ಎಲ್ಲರೂ ದೋಸ್ತಿಗಳಾಗಿದ್ದಾರೆ.

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಕ್ಲೋಸ್ ಫ್ರೆಂಡ್ ಆಗಿರೋ ಮಂಜುನಾಥ್ ಒಂದು ಫೋನ್ ಮಾಡಿದ್ರೆ ಕಾಂಗ್ರೆಸ್ ಪಾಳಯವೇ ಈತನ ಮುಂದೆ ಬಂದು ನಿಲ್ಲುತ್ತೆ. ಕೈ ನಾಯಕರ ಜೊತೆಗಿನ ಫೋಟೋಗಳನ್ನು ತೋರಿಸಿ, ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ಕೊಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದಾನೆ. ಆದ್ರೆ ಇದೀಗ ಬೆಂಗಳೂರಿನ ಸಿಸಿಬಿ ಪೊಲೀಸರು ಮಂಜುನಾಥ್‍ನನ್ನು ಹೆಡೆಮುರಿ ಕಟ್ಟಿ, ಕಂಬಿ ಹಿಂದೆ ತಳ್ಳಿದ್ದಾರೆ.

ಕಾಂಗ್ರೆಸ್ ಸರ್ಕಾರದ ಎಲ್ಲಾ ಸಚಿವರ ಜೊತೆ ಫೋಟೋ ತೆಗಿಸಿಕೊಂಡಿರೋ ಮಂಜುನಾಥ್, ಯಾರದೇ ಹುಟ್ಟುಹಬ್ಬ ಬಂದ್ರು ಕೂಡ ಬ್ಯಾನರ್ ಹಾಕಿಸಿಕೊಳ್ತಿದ್ದ. ಬಿ ಗ್ರೂಪ್ ನೌಕರಿ ಸಿಗ್ಬೇಕು ಅಂದ್ರೆ 20 ಲಕ್ಷ, ಸಿ ಗ್ರೂಪ್‍ಗೆ 15 ಲಕ್ಷ ಅಂತ ರೇಟ್ ಫಿಕ್ಸ್ ಮಾಡ್ತಿದ್ದ. ಈತನ ಸಚಿವರೊಂದಿಗಿನ ಫೋಟೋ ನೋಡಿ ಮರುಳಾದ ಜನ ಕೆಲಸಕ್ಕಾಗಿ ಲಕ್ಷಾಂತರ ಹಣ ಕೊಟ್ಟು ಈಗ ಕಣ್ಕಣ್ಣು ಬಿಡುತ್ತಿದ್ದಾರೆ.


ಮಂಜುನಾಥ್ ಬಂಧನವಾದ ವಿಷಯ ತಿಳಿಯುತ್ತಿದ್ದಂತೆ ಸರ್ಕಾರವೇ ಬಿದ್ದು ಹೋಯ್ತೇನೋ ಎನ್ನುವಂತೆ ಈತನನ್ನು ಬಿಡಿಸಲು ಪ್ರಯತ್ನ ನಡೆದಿದೆ. ಆದ್ರೆ ಸಾಕ್ಷಿ ಇದ್ದ ಕಾರಣ ಕಸ್ಟಡಿಗೆ ಪಡೆದಿರೋ ಸಿಸಿಬಿ ಪೊಲೀಸರು ಮಂಜುನಾಥ್‍ನಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *