ಚುನಾವಣಾ ಬಾಂಡ್ ಖರೀದಿಯಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದ ಮೇಘಾ ಎಂಜಿನಿಯರಿಂಗ್‍ಗೆ ಸಿಬಿಐ ಶಾಕ್

ನವದೆಹಲಿ: ಚುನಾವಣಾ ಬಾಂಡ್ (Electoral Bond) ಖರೀದಿ ಮಾಡುವ ಮೂಲಕ, ರಾಜಕೀಯ ಪಕ್ಷಗಳಿಗೆ ಹೆಚ್ಚಿನ ದೇಣಿಗೆ ನೀಡಿದ್ದ ಮೇಘಾ ಎಂಜಿನಿಯರಿಂಗ್ ಮತ್ತು ಇನ್‍ಫ್ರಾಸ್ಟ್ರಕ್ಚರ್ (Megha Engineering) ಕಂಪನಿಯ ವಿರುದ್ಧ ಸಿಬಿಐ (CBI) ಎಫ್‍ಐಆರ್ ದಾಖಲಿಸಿದೆ.

ಎನ್‍ಐಎಸ್‍ಪಿಗಾಗಿ 315 ಕೋಟಿ ರೂ. ಯೋಜನೆಯ ಅನುಷ್ಠಾನದಲ್ಲಿ ಭ್ರಷ್ಟಾಚಾರ (Corruption) ನಡೆದಿದೆ ಎಂಬ ದೂರಿನ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ. ಉಕ್ಕಿನ ಸಚಿವಾಲಯದ ಎನ್‍ಎಂಡಿಸಿ ಕಬ್ಬಿಣ ಮತ್ತು ಉಕ್ಕು ಸ್ಥಾವರದ 8 ಅಧಿಕಾರಿಗಳು ಸೇರಿದಂತೆ ಮೇಘಾ ಎಂಜಿನಿಯರಿಂಗ್ ಮತ್ತು ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಈ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್‌

ಆರೋಪವೇನು?
ಇಂಟೇಕ್ ವೆಲ್ ಮತ್ತು ಪಂಪ್ ಹೌಸ್ ಮತ್ತು ಕ್ರಾಸ್ ಕಂಟ್ರಿ ಪೈಪ್‍ಲೈನ್ ಕಾಮಗಾರಿಗೆ ಸಂಬಂಧಿಸಿದ 315 ಕೋಟಿ ರೂ. ಯೋಜನೆಯಲ್ಲಿ ಲಂಚದ ಆರೋಪದ ಬಗ್ಗೆ ಸಿಬಿಐ ಆಗಸ್ಟ್ 10, 2023 ಪ್ರಾಥಮಿಕ ತನಿಖೆ ನಡೆಸಿತ್ತು. ಇದರ ಆಧಾರದ ಮೇಲೆ ಮಾರ್ಚ್ 31 ರಂದು ದಾಖಲಾಗಿರುವ ಲಂಚದ ಪ್ರಕರಣವನ್ನು ದಾಖಲಿಸಲು ಮಾರ್ಚ್ 18 ರಂದು ಶಿಫಾರಸು ಮಾಡಲಾಗಿತ್ತು.

ಯಾರ ಮೇಲೆ ಎಫ್‍ಐಆರ್?
ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್ ದಾಶ್, ನಿರ್ದೇಶಕ (ಉತ್ಪಾದನೆ) ಡಿಕೆ ಮೊಹಾಂತಿ, ಡಿಜಿಎಂ ಪಿಕೆ ಭುಯಾನ್, ಡಿಎಂ ನರೇಶ್ ಬಾಬು, ಹಿರಿಯ ವ್ಯವಸ್ಥಾಪಕ ಸುಬ್ರೊ ಬ್ಯಾನರ್ಜಿ, ನಿವೃತ್ತ ಸಿಜಿಎಂ (ಹಣಕಾಸು) ಎಲ್ ಕೃಷ್ಣ ಮೋಹನ್, ಜಿಎಂ (ಹಣಕಾಸು) ಕೆ ರಾಜಶೇಖರ್, ವ್ಯವಸ್ಥಾಪಕ (ಹಣಕಾಸು) ಸೋಮನಾಥ್ ಘೋಷ್, ಎಲ್ಲಾ ಸೇರಿ 73.85 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಕಂಪನಿಯ ಜನರಲ್ ಮ್ಯಾನೇಜರ್ ಚಂದ್ರ ಮತ್ತು ಮೇಘಾ ಇಂಜಿನಿಯರಿಂಗ್‍ನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.

ಮೇಘಾಗೆ ಎರಡನೇ ಸ್ಥಾನ
ಇತ್ತೀಚೆಗೆ ಚುನಾವಣಾ ಬಾಂಡ್‍ಗಳ ಖರೀದಿಯಲ್ಲಿ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎರಡನೇ ಅತಿ ಹೆಚ್ಚು ಖರೀದಿದಾರ ಎಂಬ ಮಾಹಿತಿ ಹೊರ ಬಿದ್ದಿತ್ತು. 2019 ಮತ್ತು 2023ರ ನಡುವೆ ಬಾಂಡ್‍ಗಳನ್ನು ಖರೀದಿಸಿದ ಸಮಯದಲ್ಲಿ ಐದು ಪ್ರಮುಖ ಯೋಜನೆಗಳನ್ನು ಪಡೆದುಕೊಂಡಿದೆ. ಈ ಬಗ್ಗೆ ಬಿಜೆಪಿಗೆ ಹಣ ನೀಡಿದ್ದಕ್ಕಾಗಿ ಕಂಪನಿಗೆ ಹಲವು ಯೋಜನೆಗಳ ಗುತ್ತಿಗೆ ನೀಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಕಂಪನಿಯ ಒಟ್ಟು 966 ಕೋಟಿ ರೂ. ಚುನಾವಣಾ ಬಾಂಡ್ ಖರೀದಿಯಲ್ಲಿ 584 ಕೋಟಿ ರೂ. ಬಿಜೆಪಿ ಪಾಲಾಗಿದೆ. ಬಿಆರ್‍ಎಸ್ 195 ಕೋಟಿ ರೂ., ಡಿಎನ್‍ಕೆ 85 ಕೋಟಿ ರೂ. ಪಡೆದುಕೊಂಡಿದೆ. ಕಂಪನಿಯ ಬಾಂಡ್‍ಗಳನ್ನು ರಿಡೀಮ್ ಮಾಡಿದ ಇತರರಲ್ಲಿ ವೈಎಸ್‍ಆರ್ ಕಾಂಗ್ರೆಸ್, ತೆಲುಗು ದೇಶಂ, ಕಾಂಗ್ರೆಸ್, ಜನತಾ ದಳ (ಯುನೈಟೆಡ್), ಜನತಾ ದಳ (ಜಾತ್ಯತೀತ) ಮತ್ತು ಜನ ಸೇನಾ ಪಕ್ಷ ಸೇರಿದೆ. ಇದನ್ನೂ ಓದಿ: `ಹೆಲ್ತ್ ಡ್ರಿಂಕ್ಸ್’ ವರ್ಗದಿಂದ ಬೋರ್ನ್‍ವಿಟಾವನ್ನು ತೆಗೆದುಹಾಕಿ: ಕೇಂದ್ರದಿಂದ ಮಹತ್ವದ ಆದೇಶ