ವರುಣನ ಅವಕೃಪೆಯಿಂದ ಭರ್ತಿಯಾಗಿಲ್ಲ ಕಾವೇರಿ ಕೊಳ್ಳದ ಜಲಾಶಯ

-ಸಂಕಷ್ಟದಲ್ಲಿ ಪ್ರಾಧಿಕಾರದ ಸೂಚನೆ ಪಾಲನೆ

ಮಂಡ್ಯ: ವರುಣನ ಅವಕೃಪೆಯಿಂದ ಈ ಬಾರಿ ಜುಲೈ ತಿಂಗಳು ಕಳೆದರೂ ಕಾವೇರಿ ಕೊಳ್ಳದ ಯಾವ ಜಲಾಶಯವೂ ಭರ್ತಿಯಾಗಿಲ್ಲ. ಆದರೂ ಕೂಡ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.

ತಮಿಳುನಾಡಿಗೆ ಸುಮಾರು 10.5 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದ್ದು, ಕಳೆದ 15 ದಿನದಲ್ಲಿ ಇಷ್ಟು ಪ್ರಮಾಣದ ನೀರು ತಮಿಳುನಾಡಿನತ್ತ ಹರಿದಿದೆ. ಈ ಬಾರಿ ವರುಣನ ಅವಕೃಪೆಯಿಂದ ಕಾವೇರಿ ಕೊಳ್ಳದ ಯಾವ ಜಲಾಶಯವೂ ಭರ್ತಿಯಾಗಿಲ್ಲ. ಕೊಡುಗು ಜಿಲ್ಲೆಯಲ್ಲಿ ಸುರಿದ ಸಾಧಾರಣ ಮಳೆಯಿಂದ ಅಣೆಕಟ್ಟೆಗಳಿಗೆ ಸ್ಪಲ್ಪ ಪ್ರಮಾಣದ ನೀರು ಮಾತ್ರ ಹರಿದು ಬಂದಿತ್ತು. ಸಂಕಷ್ಟ ಪರಿಸ್ಥಿತಿ ಆಧಾರದ ಮೇಲೆ ತಮಿಳುನಾಡಿಗೆ 12 ಟಿಎಂಸಿ ನೀರು ಬಿಡಲು ಪ್ರಾಧಿಕಾರ ಸೂಚಿಸಿತ್ತು. ಪ್ರಾಧಿಕಾರದ ಆದೇಶದಂತೆ ಕೆಆರ್‍ಎಸ್‍ನಿಂದ ಸುಮಾರು 6.5 ಟಿಎಂಸಿ, ಕಬಿನಿ ಜಲಾಶಯದಿಂದ ಸುಮಾರು 4 ಟಿಎಂಸಿ ನೀರನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ. ಇನ್ನೆರಡು ದಿನ ನೀರು ಬಿಟ್ಟರೆ ಪ್ರಾಧಿಕಾರದ ಸೂಚನೆಯ ಕೋಟ ಪೂರ್ಣವಾಗುತ್ತದೆ.

 

ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರೆ ಜೂನ್‍ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 34.24 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ಆದರೆ ಅಲ್ಪ ಪ್ರಮಾಣದಲ್ಲಿ ಮಳೆಯಾಗಿ ಕೆಆರ್‍ಎಸ್ ಜಲಾಶಯ ಹಾಗೂ ಕಾವೇರಿ ಕೊಳ್ಳದ ಇತರೇ ಜಲಾಶಯ ತುಂಬದ ಕಾರಣಕ್ಕೆ 12 ಟಿಎಂಸಿ ನೀರು ಬಿಡಲು ಪ್ರಾಧಿಕಾರ ಸೂಚಿಸಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಎಷ್ಟು ನೀರು ಬಿಡಬೇಕೆಂಬುದು ಆ.8ರಂದು ನಡೆಯುವ ಸಭೆಯಲ್ಲಿ ತೀರ್ಮಾನವಾಗಲಿದೆ.

ಒಂದೆಡೆ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ಕೇವಲ 12 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದ್ದು, ಇದರಲ್ಲಿ 4.450 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಉಳಿದ 7.5 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಇನ್ನೊಂದೆಡೆ ಆಗಸ್ಟ್ ನಲ್ಲಿ ಮಳೆಯಾಗದಿದ್ದರೆ ಹೊಸ ಬೆಳೆ ಬೆಳೆಯಲು ನೀರು ಸಿಗುವುದಿಲ್ಲ ಎಂದು ರೈತರು ಆತಂಕದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *