ದೆಹಲಿಯಲ್ಲಿಂದು ಕಾವೇರಿ ಪ್ರಾಧಿಕಾರ ಸಭೆ- ಮೇಕೆದಾಟು ಕ್ಯಾತೆಗೆ ತಮಿಳುನಾಡು ಸಿದ್ಧತೆ

ನವದೆಹಲಿ: ಒಂದ್ಕಡೇ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳು ಬರಿದಾಗುತ್ತಾ ಹೋಗುತ್ತಿವೆ. ಮತ್ತೊಂದು ಕಡೆ ಮಂಡ್ಯ ರೈತರ ಜಮೀನಿಗೆ ನೀರು ಹರಿಸಿ ಅನ್ನೊ ಬೇಡಿಕೆ ಹೆಚ್ಚಾಗುತ್ತಿದೆ. ಜಮೀನಿಗೆ ನೀರಿರಲಿ ಮಾನ್ಸೂನ್ ಕೈ ಕೊಟ್ಟರೆ ಬೆಂಗಳೂರು ಸೇರಿ ಮೈಸೂರು ಭಾಗದಲ್ಲಿ ಕುಡಿಯುವ ನೀರಿಗೂ ಬರ ಎದುರುಸಿಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಈ ಭೀಕರ ಬೆಳವಣಿಗೆ ನಡುವೆ ತಮಿಳುನಾಡು ಮಾತ್ರ ತಮ್ಮ ಪಾಲಿನ ನೀರು ಕೊಡಿ ಎಂದು ದುಂಬಾಲು ಬಿದ್ದಿದೆ.

ಇಂದು ದೆಹಲಿಯ ಜಲ ಆಯೋಗದ ಕಚೇರಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಾಲ್ಕನೇ ಸಭೆ ನಡೆಯಲಿದೆ. ಅಧ್ಯಕ್ಷ ಮಸೂದ್ ಹುಸೇನ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕರ್ನಾಟಕ ಕೇರಳ ತಮಿಳುನಾಡು ಪುದುಚೇರಿ ರಾಜ್ಯದ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಪ್ರಮುಖವಾಗಿ ಮಾನ್ಸೂನ್ ಮಳೆ, ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳ ನೀರಿನ ಮಟ್ಟ ಹಾಗೂ ಒಳ, ಹೊರ ಹರಿವಿನ ಬಗ್ಗೆ ಚರ್ಚೆ ಆಗಲಿದೆ.

ಕಳೆದ ಸಭೆಯಲ್ಲಿ ಮುಂಗಾರು ಸಹಜವಾಗಿದ್ದರೆ ಜೂನ್ ತಿಂಗಳ ತಮಿಳುನಾಡು ಪಾಲಿನ ನೀರು 9.19 ಟಿಎಂಸಿ ಬಿಡುಗಡೆ ಮಾಡುವಂತೆ ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಆದರೆ ಕರ್ನಾಟಕದಲ್ಲಿ ಮುಂಗಾರು ಸಹಜವಾಗಿಲ್ಲ. ಕಾವೇರಿ ಕ್ಯಾಚ್ ಮೆಂಟ್ ಏರಿಯಾದಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ ಇದರಿಂದ ತಮಿಳುನಾಡಿನ ಪಾಲಿನ ನೀರು ಹರಿಸೋಕೆ ಕರ್ನಾಟಕದಿಂದ ಸಾಧ್ಯವಾಗಿಲ್ಲ. ಹಾಗಾಗಿ ಕೇವಲ ಸುಮಾರು ಎರಡು ಟಿಎಂಸಿಯಷ್ಟು ನೀರು ಹರಿಸಲಷ್ಟೆ ಕರ್ನಾಟಕಕ್ಕೆ ಸಾಧ್ಯವಾಗಿದೆ. ಆದರೆ ಉಳಿದ ನೀರಿಗಾಗಿ ತಮಿಳುನಾಡು ಪ್ರಾಧಿಕಾರದ ಮೊರೆ ಹೋಗಿದ್ದು, ಇಂದು ಪ್ರಾಧಿಕಾರ ತೆಗೆದುಕೊಳ್ಳುವ ನಿರ್ಧಾರ ಮಹತ್ವದಾಗಿದೆ.

ಮೇಕೆದಾಟು ವಿರೋಧಿಸಿ ಪ್ರಧಾನಿಗೆ ಪತ್ರ:
ಇಷ್ಟು ದಿನ ಕಾವೇರಿ ಮುಂದಿಟ್ಟುಕೊಂಡು ರಾಜಕೀಯ ಮಾಡ್ತಿದ್ದ ತಮಿಳುನಾಡು ಈಗ ಮೇಕೆದಾಟು ಯೋಜನೆ ಬೆನ್ನು ಬಿದ್ದಿದೆ. ಯಾವುದೇ ಕಾರಣಕ್ಕೂ ಯೋಜನೆಗೆ ಅವಕಾಶ ನೀಡಬಾರದು ಎಂದು ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಸಭೆ ಕರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮತ್ತೊಂದು ಕಡೆ ತಮಿಳುನಾಡು ರೈತರ ಮೆಕೆದಾಟು ಡ್ಯಾಂಗೆ ಪರ್ಯಾಯವಾಗಿ ತಮಿಳುನಾಡಿನಲ್ಲಿ ಡ್ಯಾಂ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಜಲ ಆಯೋಗದ ಅಧ್ಯಕ್ಷರೂ ಆದ ಮಸೂದ್ ಹುಸೇನ್ ಭೇಟಿಯಾದ ರೈತರು ಕೃಷ್ಣಗಿರಿ ಜಿಲ್ಲೆಯ ರಾಸಿಮನಳ್ ಎಂಬಲ್ಲಿ ಡ್ಯಾಂ ನಿರ್ಮಾಣಕ್ಕೆ ಅವಕಾಶ ಕೇಳಿದ್ದಾರೆ. ಇಂದಿನ ಸಭೆಯಲ್ಲೂ ಮೇಕೆದಾಟು ಯೋಜನೆಯೂ ಜೋರು ಸದ್ದು ಮಾಡಲಿದ್ದು ಪ್ರಾಧಿಕಾರದ ಸಭೆಯಲ್ಲೂ ಯೋಜನೆಯನ್ನು ತೀವ್ರವಾಗಿ ತಮಿಳುನಾಡು ವಿರೋಧಿಸಲಿದೆ.

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿರುವ ಮಸೂದ್ ಹುಸೇನ್ ಇದೇ ತಿಂಗಳ ಅಂತ್ಯದಲ್ಲಿ ನಿವೃತ್ತಿಯಾಗಲಿದ್ದು, ತಮ್ಮ ನೇತೃತ್ವದಲ್ಲಿ ಕೊನೆಯ ಬಾರಿ ಪ್ರಾಧಿಕಾರದ ಸಭೆ ನಡೆಸಲಿದ್ದು ಇಂದು ಅದೆಂಥ ನಿರ್ಧಾರ ಹೊರ ಬರಲಿದೆ ಎಂದು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *