ದರೋಡೆಕೋರರೆಂದು ಭಾವಿಸಿ ಬೆಕ್ಕು ಹಿಡಿಯುವವರ ಮೇಲೆ ಹಲ್ಲೆ – ವ್ಯಕ್ತಿ ಸಾವು

– ಗುಂಪು ಘರ್ಷಣೆಗೆ ಸಂತ್ರಸ್ತ ಬಲಿ

ಹೈದರಾಬಾದ್: ದರೋಡೆಕೋರ ಎಂದು ಭಾವಿಸಿ ವ್ಯಕ್ತಿಯ ಮೇಲೆ ಸಾರ್ವಜನಿಕರ ಗುಂಪು ದಾಳಿ ನಡೆಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ತೆಲಂಗಾಣದ ಜೆಗ್ತಿಯಲ್ ಜಿಲ್ಲೆಯ ಕೊರುಟ್ಲಾ ನಗರದ ಪ್ರಕಾಶ ನಗರದಲ್ಲಿ ಈ ಘಟನೆ ನಡೆದಿದ್ದು, ತನ್ನ ಇಬ್ಬರು ಸ್ನೇಹಿತರೊಂದಿಗೆ ಬೆಕ್ಕು ಹಿಡಿಯುತ್ತಿದ್ದ ವೇಳೆ ದರೋಡೆಕೋರರು ಎಂದು ಭಾವಿಸಿ ಸ್ಥಳೀಯರ ಗುಂಪೊಂದು ಅವರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೊಳಗಾದ ಮೂವರು ಮೆಟ್ಪಲ್ಲಿಯವರು ಎಂದು ಗುರುತಿಸಲಾಗಿದೆ.

ಜನರ ಗುಂಪು ದಾಳಿ ನಡೆಸಿದ ಸಂದರ್ಭದಲ್ಲಿ ಸಂತ್ರಸ್ತನ ಜೊತೆಗಿದ್ದ ಇನ್ನಿಬ್ಬರು ಸಹ ತೀವ್ರ ಗಾಯಗೊಂಡಿದ್ದಾರೆ. ಈ ಮೂವರು ಬೆಕ್ಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಅನುಮಾನಗೊಂಡ ಆ ಪ್ರದೇಶದ ಮಹಿಳೆಯರಿಬ್ಬರು ಸಂತ್ರಸ್ತರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಸಂತ್ರಸ್ತರು ಉತ್ತರಿಸಿದ್ದಾರೆ. ಇದನ್ನು ಕೇಳದ ಮಹಿಳೆಯರು ಜೋರಾಗಿ ಕೂಗಿ ಕಳ್ಳರು ಬಂದಿದ್ದಾರೆ ಎಂದು ಹೇಳಿದ್ದಾರೆ. ಆಗ ಹತ್ತಾರು ಜನರ ಗುಂಪು ಸ್ಥಳಕ್ಕೆ ಧಾವಿಸಿದ್ದು, ಮೂವರ ಮೇಲೆ ದಾಳಿ ನಡೆಸಿದೆ ಎಂದು ಎಸ್‍ಐ ಆಜನೇಯಲು ಮಾಹಿತಿ ನೀಡಿದ್ದಾರೆ.

ಸಂತ್ರಸ್ತರನ್ನು ಥಳಿಸಿದ್ದರಿಂದ ಗಲಿಬಿಲಿಗೊಂಡ ಇನ್ನೊಂದು ಸುಮುದಾಯದ ಜನತೆ ನಮ್ಮ ಸಮುದಾಯದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿದಾಳಿ ನಡೆಸಲು ಮುಂದಾಗಿದ್ದಾರೆ. ಆಗ ಎರಡೂ ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಆಗ ಇನ್ನೊಂದು ಗುಂಪು ಈ ಮೂವರ ಮೇಲೆ ದಾಳಿ ನಡೆಸಿದ್ದು ಒಬ್ಬ ಸಾವನ್ನಪ್ಪಿದ್ದಾನೆ. ಇನ್ನೂ ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *