ಜಾತಿಗಣತಿ ವಿಶೇಷ ಕ್ಯಾಬಿನೆಟ್‌- ಲಿಂಗಾಯತ, ಒಕ್ಕಲಿಗ, ದಲಿತ, ಅಲ್ಪಸಂಖ್ಯಾತರು ಹೇಳಿದ್ದೇನು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

ಬೆಂಗಳೂರು: ಜಾತಿ ಗಣತಿ (Caste Census) ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಕೋಲಾಹಲವೇ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ವಿಶೇಷ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತಾದರೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಸಂಪುಟ ಸಭೆಯಲ್ಲಿ ಲಿಂಗಾಯತ (Lingayat) ಹಾಗೂ ಒಕ್ಕಲಿಗ (Vokkaliga) ಸಚಿವರ ತೀವ್ರ ಆಕ್ಷೇಪದಿಂದಾಗಿ, ಮೇ 2ಕ್ಕೆ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ. ಎಲ್ಲ ಸಚಿವರ ಅಭಿಪ್ರಾಯವನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಸಿಎಂ ಸಿದ್ದರಾಮಯ್ಯ ಬರವಣಿಗೆ ರೂಪದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಲು ಸೂಚಿಸಿದ್ದಾರೆ.

ಸಂಪುಟ ಸಭೆಯಲ್ಲಿ ಏರುಧ್ವನಿಯಲ್ಲೇ ಜಾತಿಗಣತಿ ವರದಿಯನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ (Mallikarjun) ವಿರೋಧಿಸಿದ್ದರು ಎಂದು ಮೂಲಗಳು ತಿಳಿಸಿವೆ. ಮುಸ್ಲಿಮರಲ್ಲೂ ನೂರಾರು ಉಪ ಪಂಗಡಗಳಿವೆ ಎಲ್ಲವನ್ನೂ ಯಾಕೆ ಒಂದರಲ್ಲೇ ಸೇರಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಕೂಡ ಗಟ್ಟಿಧ್ವನಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

 

ಸಂಪುಟ ಸಭೆ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಹಾಗೂ ಒಕ್ಕಲಿಗ ಸಚಿವರು ಪ್ರತ್ಯೇಕವಾಗಿ ಚರ್ಚೆ ನಡೆಸಿದರು.  ಈ ಮಧ್ಯೆ ಸಂಪುಟ ಸಭೆಗೆ 11 ಪುಟಗಳ ಟಿಪ್ಪಣಿ ಸಲ್ಲಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಾರ್ಖಂಡ್‌ನಲ್ಲಿ ಒಬಿಸಿ ಮೀಸಲಾತಿ 77%, ತಮಿಳುನಾಡಲ್ಲಿ 69% ಇದ್ದು, ಇಲ್ಲೂ ಕೂಡ ಮೀಸಲಾತಿ (Reservation) ಪ್ರಮಾಣವನ್ನು 32%ರಿಂದ 51%ಕ್ಕೆ ಏರಿಸುವಂತೆ ಟಿಪ್ಪಣಿ ಸಲ್ಲಿಸಿದೆ.ಇವತ್ತಿನ ಸಂಪುಟ ಸಭೆಗೆ ಪೂರ್ವಾನುಮತಿ ಪಡೆದು ಸಚಿವರಾದ ದಿನೇಶ್‌ಗುಂಡೂರಾವ್ ಹಾಗೂ ವೆಂಕಟೇಶ್ ಗೈರಾಗಿದ್ದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು: ಧನಕರ್‌ ಅಸಮಾಧಾನ

 

ಸಂಪುಟ ಸಭೆಯಲ್ಲಿ ಲಿಂಗಾಯತರ ವಾದವೇನು?
ಜಾತಿಗಣತಿ ವರದಿಯಲ್ಲಿ ನಮ್ಮ ಸಮುದಾಯ 11% ಅಂತಿದೆ. 1990ರಲ್ಲೇ ಚಿನ್ನಪ್ಪರೆಡ್ಡಿ ಆಯೋಗ 17% ಅಂತ ವರದಿ ಕೊಟ್ಟಿದೆ. ಎಲ್ಲಾ ಉಪಜಾತಿಗಳು ಸೇರಿದ್ರೆ ನಮ್ಮ ಸಮುದಾಯದ ಸಂಖ್ಯೆ 22% ರಷ್ಟಿದೆ. ನಮ್ಮ ಜನಸಂಖ್ಯೆ 11% ಎಂಬ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಮೊದಲು ಈ ದೋಷವನ್ನು ಸರಿಪಡಿಸಿ. ಆಮೇಲೆ ವರದಿ ಬಿಡುಗಡೆ ಮಾಡಿ.

ಒಕ್ಕಲಿಗ ಸಚಿವರ ವಾದವೇನು?
ನಮ್ಮ ಸಮುದಾಯವನ್ನು ಬೇರೆ ಬೇರೆ ಕ್ಲಾಸ್‌ಗಳಲ್ಲಿ ಗುರುತಿಸಲಾಗಿದೆ. ಈಗಿರುವ ಅಂಕಿ ಅಂಶ ಒಪ್ಪಲು ಸಾಧ್ಯವಿಲ್ಲ. ಎಲ್ಲಾ ವರ್ಗಗಳಲ್ಲಿರೋ ಸಮುದಾಯವನ್ನು ಒಟ್ಟಿಗೆ ಸೇರಿಸಿ. ದೋಷ ಸರಿಪಡಿಸಿ ಘೋಷಣೆ ಮಾಡುವುದಾದರೆ ಮಾಡಿ. ಇಲ್ಲದಿದ್ದರೆ ಮರು ಸಮೀಕ್ಷೆ ಮಾಡಿ.

ದಲಿತ, ಅಲ್ಪಸಂಖ್ಯಾತ ಸಚಿವರುಗಳ ವಾದವೇನು?
ಜಾತಿಗಣತಿಯಿಂದ ಹಿಂದೆ ಸರಿಯೋದು ಬೇಡ. ಹೈಕಮಾಂಡ್ ಆಜ್ಞೆಯಂತೆ ನಡೆದುಕೊಂಡು ಜಾತಿಗಣತಿ ವರದಿ ಜಾರಿಯಾಗಲೇಬೇಕು. ನಮ್ಮ ಪ್ರಣಾಳಿಕೆಯಲ್ಲೇ ಜಾತಿಗಣತಿ ಪ್ರಸ್ತಾಪವಿದೆ. ಯಾವುದೇ ಒತ್ತಡಕ್ಕೆ ಮಣಿಯಬೇಡಿ. ಅಗತ್ಯವಿದ್ರೆ ಅಧ್ಯಯನ ಸಮಿತಿ ರಚಿಸಿ, ಪರಾಮರ್ಶಿಸಿ.