ನಿರ್ಮಾಣ ಹಂತದ ಸೇತುವೆಯ ಕೆಳಗೆ ಹಾರಿದ ಕಾರು

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನಿರ್ಮಾಣ ಹಂತದ ಸೇತುವೆಯ ಕೆಳಗೆ ಹಾರಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ನಗರದ ಶ್ರೀ ಶನಿಮಹಾತ್ಮಸ್ವಾಮಿ ದೇವಾಲಯದ ಬಳಿ ಬೆಂಗಳೂರು-ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಸೇತುವೆಯ ಕೆಳ ಭಾಗಕ್ಕೆ ಕಳೆದ ರಾತ್ರಿ ಕಾರೊಂದು ಉರುಳಿಬಿದ್ದಿದೆ. ಅದೃಷ್ಟವಶಾತ್ ಕಾರು ಚಾಲಕ ಮಂಜುನಾಥ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂದಹಾಗೆ ಕಳೆದ ಆರು ತಿಂಗಳಿಂದ ಈ ಸೇತುವೆ ನಿರ್ಮಾಣ ಕಾರ್ಯ ಜರುಗುತ್ತಿದೆ. ಕಾಮಗಾರಿ ನಡೆಸುತ್ತಿರುವ ಜಾಗದಲ್ಲಿ ಯಾವುದೇ ರೀತಿಯ ಎಚ್ಚರಿಕೆ ಹಾಗೂ ಮುಂಜಾಗೃತ ನಾಮಫಲಕಗಳು ಇಲ್ಲದಿರುವುದರಿಂದ ಈ ರೀತಿಯ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಸೇತುವೆ ನಿರ್ಮಾಣ ಕಾಮಗಾರಿ ಜರುಗುತ್ತಿದ್ದು, ಸೇತುವೆಯ ಕೆಳಭಾಗದಲ್ಲಿ ದೊಡ್ಡ ದೊಡ್ಡದಾದ ದಿಂಡುಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳ ಮೇಲ್ಭಾಗದಲ್ಲಿ ದೊಡ್ಡ ಗಾತ್ರದ ಕಬ್ಬಿಣದ ರಾಡುಗಳು ಸಹ ಹಾಗೆ ಇವೆ. ಆದರೆ ಅದೃಷ್ಟವಶಾತ್ ಕಬ್ಬಿಣದ ರಾಡುಗಳನ್ನು ಮಡಿಚಿರುವ ಕಾರಣ ಕಾರಿಗೆ ದೊಡ್ಡಮಟ್ಟದ ಹಾನಿಯಾಗಿಲ್ಲ. ಹೀಗಾಗಿ ಅದೃಷ್ಟವೆಂಬಂತೆ ಕಾರು ಚಾಲಕ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಒಂದು ವೇಳೆ ಕಬ್ಬಿಣದ ಸರಳುಗಳು ಮಡಚದೆ ಹಾಗೆ ನೇರವಾಗಿ ಇದ್ದಿದ್ದರೆ ಕಬ್ಬಿಣದ ಸರಳುಗಳು ಕಾರಿಗೆ ಚುಚ್ಚಿಕೊಂಡು ಚಾಲಕನ ಪ್ರಾಣಕ್ಕೂ ಕುತ್ತು ತರುವ ಸಂಭವವಿತ್ತು. ಹೀಗಾಗಿ ಕಾಮಗಾರಿಯ ಸ್ಥಳದಲ್ಲಿ ಸೂಕ್ತ ಭದ್ರತೆಯ ತಡೆಗೋಡೆ ನಿರ್ಮಾಣ ಮಾಡಬೇಕು ಅಂತ ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *