ನಂಬರ್ ಪ್ಲೇಟ್ ಇಲ್ಲದ್ದಕ್ಕೆ ಬಿತ್ತು 9.8 ಲಕ್ಷ ರೂ. ದಂಡ

– ಪೋರ್ಷೆ ಕಾರ್ ಮಾಲೀಕ ಕಂಗಾಲು

ಅಹ್ಮದಾಬಾದ್: ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಿದ್ದಕ್ಕಾಗಿ ಪೊಲೀಸರು ಹಾಕಿದ ದಂಡವನ್ನು ಕಂಡು ಕಾರು ಮಾಲೀಕ ಬೆಚ್ಚಿ ಬಿದ್ದಿದ್ದಾನೆ.

ಗುಜರಾತಿನಲ್ಲಿ ಈ ಘಟನೆ ನಡೆದಿದ್ದು, ಅಹಮದಾಬಾದ್ ಪೊಲೀಸರು ಪೋರ್ಷೆ 911 ಕಾರಿನ ನಂಬರ್ ಪ್ಲೇಟ್ ಹಾಗೂ ಅಧಿಕೃತ ದಾಖಲೆಗಳು ಇಲ್ಲದ್ದಕ್ಕೆ ಮಾಲೀಕನಿಗೆ 9.8 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಅಹಮದಾಬಾದ್‍ನ ಸಿಂಧು ಭವನ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಈ ಐಷಾರಾಮಿ ಕಾರು ಸಂಚರಿಸುತ್ತಿದ್ದನ್ನು ಕಂಡ ಪೊಲೀಸರು ಈ ಪರಿಪ್ರಮಾಣದ ದಂಡ ವಿಧಿಸಿದ್ದಾರೆ. ರಸ್ತೆ ಸುರಕ್ಷತೆಗಾಗಿ ಪೊಲೀಸರು ಹಮ್ಮಿಕೊಂಡಿರುವ ಅಭಿಯಾನದ ಭಾಗವಾಗಿ 10 ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದ್ದಾರೆ. ಇದೀಗ ಪೋರ್ಷೆ ಕಾರನ್ನು ಸೀಜ್ ಮಾಡಿದ್ದು, ಇದರ ಬೆಲೆ ಭಾರತದಲ್ಲಿ 2 ರಿಂದ 2.35 ಕೋಟಿ ರೂ.ಗಳಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ಅಹಮದಾಬಾದ್ ಪೊಲೀಸರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಪಶ್ಚಿಮ ಅಹಮದಾಬಾದ್‍ನಲ್ಲಿ ಪರಿಶೀಲನೆ ವೇಳೆ ಪೋರ್ಷೆ 911 ಕಾರನ್ನು ಸಬ್ ಇನ್ಸ್‍ಪೆಕ್ಟರ್ ಎಂ.ಬಿ.ವಿರ್ಜಾ ಅವರು ಹಿಡಿದಿದ್ದಾರೆ. ಈ ಕಾರಿಗೆ ನಂಬರ್ ಪ್ಲೇಟ್ ಹಾಗೂ ಅಧಿಕೃತ ದಾಖಲೆಗಳು ಇರಲಿಲ್ಲ. ಹೀಗಾಗಿ ವಾಹನವನ್ನು ವಶಕ್ಕೆ ಪಡೆದು 9.80 ಲಕ್ಷ ರೂ.ದಂಡ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ನಂತರ ಸಂಚಾರಿ ನಿಯಮ ಪಾಲಿಸದವರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಘಟನೆಯೊಂದರಲ್ಲಿ ಓವರ್‍ಲೋಡ್ ಹಾಗೂ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದ್ದಕ್ಕೆ ಲಾರಿ ಚಾಲಕನಿಗೆ 2 ಲಕ್ಷ ರೂ.ದಂಡ ವಿಧಿಸಲಾಗಿತ್ತು.

Comments

Leave a Reply

Your email address will not be published. Required fields are marked *