ಮಕ್ಕಳಾದ ಸಂತಸಕ್ಕೆ ಹರಕೆ ತೀರಿಸಿ ವಾಪಸ್ ಬರ್ತಿದ್ದ ಮೂವರ ದುರ್ಮರಣ

– ಕಾರ್ ಪಲ್ಟಿಯಾಗಿ ಸಂಪೂರ್ಣ ನಜ್ಜುಗುಜ್ಜು
– ಬಿಜೆಪಿ ಮಾಜಿ ಅಧ್ಯಕ್ಷನ ಪತ್ನಿ, ಅತ್ತೆ ಮಗು ಸಾವು

ಗದಗ: ದೇವರ ಹರಕೆ ತೀರಿಸಿ ಮರಳಿ ಬರುವ ವೇಳೆ ಕಾರು ಪಲ್ಟಿಯಾದ ಪರಿಣಾಮ ಒಂದೆ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಲಕ್ಕುಂಡಿ ಬೂದಿ ಬಸವೇಶ್ವರ ದೇವಸ್ಥಾನ ಬಳಿ ನಡೆದಿದೆ.

ಬಿಜೆಪಿ ಕೊಪ್ಪಳ ನಗರ ಘಟಕದ ಮಾಜಿ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಹಕ್ಕಾಪಕ್ಕಿ ಅವರ ಅತ್ತೆ, ಹೆಂಡತಿ ಹಾಗೂ ಮಗು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಮೀಳಾ ಮಸ್ಕಿ (68), ಯಶೋಧಾ ಹಕ್ಕಾಪಕ್ಕಿ (43) ಮತ್ತು ಆರ್ಯಾ (16 ತಿಂಗಳು ಮಗು) ಮೃತ ದುರ್ದೈವಿಗಳು. ಅವಳಿ ಜವಳಿ ಮಕ್ಕಳಲ್ಲಿ ಗಂಡು ಮಗು ಆರ್ಯಾ ಸಾವನ್ನಪ್ಪಿದ್ದು, ಹೆಣ್ಣು ಮಗು ಬದುಕುಳಿದೆ. ಆ ಮಗುಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆಯಾಗಿ ಬಹಳ ವರ್ಷಗಳಾದರೂ ಹಕ್ಕಾಪಕ್ಕಿ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನವಲಗುಂದದ ರಾಮಲಿಂಗ ಹೋಳಿ ಕಾಮಣ್ಣನಿಗೆ ಹರಕೆ ಕಟ್ಟಿಕೊಂಡಿದ್ದರು. ಒಂದೂವರೆ ವರ್ಷದ ನಂತರ ಮಕ್ಕಳಾದ ಸಂತಸದಲ್ಲಿ ಹೋಳಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಸೋಮವಾರ ಹರಕೆ ತೀರಿಸಿ ಕೊಪ್ಪಳಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ಲಕ್ಕುಂಡಿ ಬೂದಿ ಬಸವೇಶ್ವರ ದೇವಸ್ಥಾನ ಬಳಿ ವೇಗವಾಗಿ ಚಲಿಸುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಉಳಿದ ಇಬ್ಬರು ಪ್ರಯಾಣಿಕರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಕುಮಾರ್ ಹಕ್ಕಾಪಕ್ಕಿ ಮತ್ತು ಇನ್ನೊಂದು ಅವಳಿ ಮಗು ಅಪಾಯದಿಂದ ಪಾರಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಾಹಿತಿ ತಿಳಿದು ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *