ಕಾರು ಹರಿದು ಹೋದ್ರು ಬದುಕುಳಿದ ಬಾಲಕ- ವಿಡಿಯೋ ನೋಡಿ

ಬೆಂಗಳೂರು: ಕಾರಿನ ಕೆಳಗೆ ಸಿಲುಕಿದ್ದ 8 ವರ್ಷದ ಬಾಲಕನೊಬ್ಬ, ಅದೃಷ್ಟವಶಾತ್ ಬದುಕುಳಿದ ವಿಡಿಯೋವನ್ನು ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಮುಂಬೈ ನಗರದ ಗೋರೆಗಾಂವ್‍ನ ಸದ್ಗುರು ಕಾಂಪ್ಲೆಕ್ಸ್ ನಲ್ಲಿ ಇದೇ 24ರಂದು ಈ ಘಟನೆ ಸಂಭವಿಸಿದೆ. ಈ ದೃಶ್ಯವು ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‘ಇದನ್ನು ನೋಡುವುದರಿಂದ ಹೆಚ್ಚಿನದ್ದನ್ನು ಕಲಿಯಬಹುದು’ ಎಂದು ಬರೆದು ಬೆಂಗಳೂರು ನಗರ ಪೊಲೀಸರು ಗುರುವಾರ ಬೆಳಗ್ಗೆ ವಿಡಿಯೋ ಟ್ವೀಟ್ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಸಂಜೆ ಕೆಲವು ಮಕ್ಕಳು ರಸ್ತೆಯ ಮೇಲೆ ಆಟ ಆಡುತ್ತಿದ್ದು, ಅವರಲ್ಲಿ ಕೆಂಪು ಟಿ-ಶರ್ಟ್ ಧರಿಸಿದ್ದ ಬಾಲಕನೊಬ್ಬ ಕುಳಿತು ಶೂ ಲೇಸ್ ಕಟ್ಟಿಕೊಳ್ಳುವಲ್ಲಿ ನಿರತನಾಗಿರುತ್ತಾನೆ. ಇದೇ ವೇಳೆ ಆತನ ಹಿಂದೆ ಮಹಿಳೆಯೊಬ್ಬರು ಕಾರು ಚಾಲನೆ ಮಾಡಿದ್ದಾರೆ. ಕಾರಿನ ಹೆಡ್‍ಲೈಟ್ ಆನ್ ಮಾಡಿಕೊಂಡು ಹಿಂದಕ್ಕೆ ಚಾಲನೆ ಮಾಡಿ, ಬಳಿಕ ಮುಂದೆ ಸಾಗುತ್ತಾರೆ. ಆದರೆ ಕಾರಿನ ಮುಂದೆ ಬಾಲಕ ಇರುವುದನ್ನು ಅವರು ನೋಡಿರುವುದಿಲ್ಲ. ಇತ್ತ ಬಾಲಕನೂ ಕಾರು ಬರುವುದನ್ನು ಗಮನಿಸದೇ ಲೇಸ್ ಕಟ್ಟಿಕೊಳ್ಳುವಲ್ಲಿ ನಿರತನಾಗಿರುತ್ತಾನೆ.

ಕಾರು ಬಾಲಕನ ಮೇಲೆ ಹಾಯ್ದು ಹೋಗುತ್ತದೆ. ಬಳಿಕ ಕಾರು ಮುಂದೆ ಸಾಗುತ್ತಿದ್ದಂತೆ ಬಾಲಕ ಹೊರಗೆ ಬರುತ್ತಾನೆ. ಅದೃಷ್ಟವಶಾತ್ ಬಾಲಕ ಬದುಕುಳಿದಿದ್ದು, ಗಾಬರಿಯಿಂದ ಸ್ನೇಹಿತರ ಬಳಿಗೆ ಓಡಿ ಹೋಗಿದ್ದಾನೆ.

ಟ್ವಿಟ್ಟರ್ ನಲ್ಲಿ ಈ ದೃಶ್ಯವನ್ನು ಪೊಲೀಸರು ಟ್ವೀಟ್ ಮಾಡಿದ್ದು, ಕೆಲ ಸಮಯದಲ್ಲಿಯೇ ವಿಡಿಯೋ ವೈರಲ್ ಆಗಿದೆ. ಘಟನೆಯ ಕುರಿತು ಟ್ವಿಟ್ಟರ್ ನಲ್ಲಿ ಜನರು ಭಾರೀ ಚರ್ಚೆ ನಡೆಸಿದ್ದಾರೆ. ಕೆಲವರು ಕಾರು ಚಾಲನೆ ಮಾಡಿದ ಮಹಿಳೆಯನ್ನು ಬಂಧಿಸಿ, ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಇನ್ನೂ ಕೆಲವರು, ಪೋಷಕರು ಮಕ್ಕಳನ್ನು ಹೀಗೆ ರಸ್ತೆಯಲ್ಲಿ ಆಟ ಆಡಲು ಬೀಡುವುದೇ ತಪ್ಪು ಎಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *