ಕಾರಿನಲ್ಲಿ ಹೆಲ್ಮೆಟ್ ಹಾಕದ್ದಕ್ಕೆ ಚಾಲಕನ ಮೇಲೆ ಬಿತ್ತು ದಂಡ

ಲಕ್ನೋ: ಉತ್ತರ ಪ್ರದೇಶದ ಆಲಿಘರ್‌ನಲ್ಲಿ ಟ್ರಾಫಿಕ್ ಪೊಲೀಸರು ಕಾರು ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದು, ಆ ಚಾಲಕ ಹೆಲ್ಮೆಟ್ ಹಾಕಿಕೊಂಡೇ ಈಗ ಕಾರು ಚಲಾಯಿಸುತ್ತಿದ್ದಾರೆ.

ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದು ಸಂಚಾರಿ ನಿಯಮಗಳಲ್ಲಿ ಜಾರಿಯಲ್ಲಿ ಇರುವುದು ಎಲ್ಲರಿಗೂ ತಿಳಿದಿದೆ ಆದರೆ ಉತ್ತರ ಪ್ರದೇಶದಲ್ಲಿ ಕಾರಿನಲ್ಲಿ ಹೆಲ್ಮೆಟ್ ಹಾಕಿಲ್ಲ ಎಂದು ಪೊಲೀಸರು ಚಾಲಕನಿಗೆ ದಂಡ ಹಾಕಿದ್ದಾರೆ. ಕಾರು ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವಿದೆ ಆದರೆ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಇಲ್ಲದಿದ್ದರೂ ಪೊಲೀಸರು ದಂಡ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಚಾಲಕ ಈಗ ದಿನವೂ ಹೆಲ್ಮೆಟ್ ಹಾಕಿಕೊಂಡೇ ಕಾರು ಚಲಾಯಿಸುತ್ತಿದ್ದಾರೆ.

ಆಲಿಘರ್‌ನ ಪಿಯುಷ್ ವರ್ಶ್ನಿ ಅವರು ಕಾರಿನಲ್ಲಿ ಹೆಲ್ಮೆಟ್ ಹಾಕದಿದ್ದಕ್ಕೆ ದಂಡ ಕಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಗಸ್ಟ್ 27ರಂದು ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್ ಪೊಲೀಸರು ನನಗೆ 500 ರೂ. ದಂಡ ವಿಧಿಸಿ, ಇ-ಚಲನ್ ನೀಡಿದ್ದರು. ಇ-ಚಲನ್‍ನಲ್ಲಿ ನನ್ನ ಕಾರಿನ ಸಂಖ್ಯೆ ಇತ್ತು. ಆದ್ದರಿಂದ ಮತ್ತೆ ದಂಡ ಹಾಕಬಹುದೆಂಬ ಭಯದಿಂದ ನಾನು ಹೆಲ್ಮೆಟ್ ಹಾಕಿಕೊಂಡೇ ಕಾರು ಒಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂದು ಸಂಚಾರಿ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಇ-ಚಲನ್ ಮೇಲೆ ತನ್ನ ಕಾರಿನ ಸಂಖ್ಯೆ ಇದೆ ಎಂದು ಪಿಯುಷ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಚಾರಿ ಪೊಲೀಸರ ಎಡವಟ್ಟಾಗಿದ್ದು, ಚಲನ್ ಪರಿಶೀಲನೆ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ದೂರು ದಾಖಲಾದ ಬಳಿಕ ಪೊಲೀಸರು ಇ-ಚಲನ್ ಪರಿಶೀಲನೆ ಮಾಡಿದ್ದು, ತಪ್ಪಾಗಿ ದತ್ತಾಂಶ ನಮೂದಾಗಿರುವುದು ಬೆಳಕಿಗೆ ಬಂದಿದೆ. ಈ ಚಲನ್ ತಪ್ಪೆಂದು ಗೊತ್ತಾದ ಬಳಿಕ ಅದನ್ನು ಸರಿಪಡಿಸಿದ್ದೇವೆ ಎಂದು ಸಂಚಾರಿ ಪೊಲೀಸ್ ವರಿಷ್ಠಾಧಿಕಾರಿ ಅಜಿಜುಲ್ ಹಖ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ದೇಶದಲ್ಲೆಡೆ ದಂಡ ವಿಧಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. 80 ಸಾವಿರದವರೆಗೂ ದಂಡ ವಿಧಿಸಿರುವ ಉದಾಹರಣೆಗಳಿವೆ. ಈ ಹೊಸ ನಿಯಮದಿಂದ ಸಂಚಾರಿ ನಿಯಮ ಉಲ್ಲಂಘಿಸುವವರ ಜೇಬಿಗೆ ಭಾರೀ ಪ್ರಮಾಣದಲ್ಲಿ ಕತ್ತರಿ ಬೀಳುತ್ತಿದ್ದು, ನಿಯಮ ಜಾರಿಗೆ ಬಂದ ಕೆಲವೇ ದಿನಗಳಲ್ಲಿ ಸಂಚಾರಿ ಪೊಲೀಸರು ಒಂದೇ ದಿನದಲ್ಲಿ ಲಕ್ಷಾಂತರ ರೂ. ದಂಡವನ್ನು ಸಂಗ್ರಹಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *