ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡೋಕೆ ಸಾಧ್ಯವಿಲ್ಲ: ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ

ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಎಂದು ಹೇಳಿದ್ದಾರೆ.

ವಿಧಾನ ಪರಷತ್‍ನಲ್ಲಿ ಮಾತನಾಡಿದ ಸಚಿವರು, ಸಾರಿಗೆ ಇಲಾಖೆ ಈಗಾಗಲೇ ನಷ್ಟದಲ್ಲಿದೆ. ಸಾರಿಗೆ ಇಲಾಖೆಗೆ 25% ಹಣ ಒದಗಿಸಲು ಸಾಧ್ಯವಿಲ್ಲ. ಸರ್ಕಾರ ಇನ್ನು 75% ಹಣ ಬಿಡುಗಡೆ ಮಾಡಬೇಕಿದೆ. ಉಳಿದ 25% ಹಣ ಒದಗಿಸಲು ಸಿಎಂಗೆ ಪತ್ರ ಬರೆಯಲಾಗುವುದು. ಅಲ್ಲಿಯವರೆಗೂ ಉಚಿತ ಬಸ್ ನೀಡಲು ಸಾಧ್ಯವೇ ಇಲ್ಲ ಎಂದು ಡಿ.ಸಿ.ತಮ್ಮಣ್ಣ ತಿಳಿಸಿದರು.

ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಉಚಿತ ಬಸ್ ಪಾಸ್ ನೀಡಲು ಹೇಳಿದ್ರು. ಅಂದಿನ ಬಜೆಟ್ ಗೆ ಸದನದ ಒಪ್ಪಿಗೆಯೂ ದೊರೆತಿದೆ. ಈಗ ಆರ್ಥಿಕ ಇಲಾಖೆ ಇನ್ನು ಕ್ಲಿಯರೆನ್ಸ್ ಕೊಟ್ಟಿಲ್ಲ ಅಂತ ಹೇಳೋದು ಸರಿಯಲ್ಲ. ಈಗಾಗಲೇ ಶಾಲಾ-ಕಾಲೇಜುಗಳು ಪ್ರಾರಂಭವಾಗಿವೆ. ಕೂಡಲೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಕಾಂಗ್ರೆಸ್ ನ ಎಸ್.ಆರ್.ಪಾಟೀಲ್, ಐವಾನ್ ಡಿಸೋಜಾ, ಸೇರಿದಂತೆ ಹಲವು ಸದಸ್ಯರು ಆಗ್ರಹಿಸಿದರು.

ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಸಾರಿಗೆ ಇಲಾಖೆ ನಿಗಮಗಳು ಸ್ವಾಯತ್ತ ಸಂಸ್ಥೆಗಳು. ಕಳೆದ ವರ್ಷದ 5 ಕೋಟಿ ರೂ. ಹಣವೇ ಸರ್ಕಾರದಿಂದ ಇನ್ನು ಬಿಡುಗಡೆ ಆಗಿಲ್ಲ. ಹಣವೇ ಇಲ್ಲದೆ ನಿಗಮ ನಡೆಸೋದು ಹೇಗೆ? ಹಣ ಎಲ್ಲಿಂದ ಬರುತ್ತೆ? ಹಣವನ್ನು ವಿರೋಧ ಪಕ್ಷದವರು ಕೊಡ್ತಾರಾ ಎಂದು ಪ್ರಶ್ನಿಸಿದರು.

ಇಂತಹ ಹೇಳಿಕೆ ಸಚಿವರು ಹೇಳೋದು ಅವರ ಸರ್ಕಾರದ ಕ್ಷಮತೆ ತೋರುತ್ತದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಸಿದ್ದರಾಮಯ್ಯ ಬಜೆಟ್ ಯಾವುದೇ ಬದಲಾವಣೆ ಮಾಡೊಲ್ಲ ಅಂತ ಸಿಎಂ ಹೇಳಿದ್ದಾರೆ. ಈಗ ಬಸ್ ಪಾಸ್ ನೀಡೊಲ್ಲ ಅಂದ್ರೆ ಹೇಗೆ? ಎಂದು ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್ ಸಚಿವರನ್ನು ಪ್ರಶ್ನಿಸಿದರು.

ಕೊನೆಗೆ ನಾಯಕರ ನಡುವೆ ಮಾತಿನ ಚಕಮಕಿ ಹೆಚ್ಚಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರೇ ಈಗ ಏನು ಮಾತಾಡದೇ ಸಿಎಂ ಜೊತೆ ಮಾತಾಡಿ ನಾಳೆ ಉತ್ತರ ಕೊಡಿ ಎಂದು ಸಮಾಧಾನ ಮಾಡಿದರು.

Comments

Leave a Reply

Your email address will not be published. Required fields are marked *