ಸಂಸತ್‍ನಲ್ಲಿ ಚಾಕಲೇಟ್ ತಿಂದಿದ್ದಕ್ಕೆ ಕ್ಷಮೆ ಕೇಳಿದ ಕೆನಡಾ ಪ್ರಧಾನಿ

ಒಟ್ಟಾವಾ: ಭ್ರಷ್ಟಾಚಾರ ಆರೋಪ ಮತದಾನದ ವೇಳೆ ಸಂಸತ್ ಭವನದಲ್ಲಿ ಚಾಕಲೇಟ್ ತಿಂದಿದ್ದಕ್ಕಾಗಿ ಕೆನಡಾ ಪ್ರಧಾನ ಮಂತ್ರಿ ಸಂಸತ್‍ನ ಕ್ಷಮೆ ಕೇಳಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಹೀಗಾಗಿ ಆರೋಪದ ಕುರಿತು ಸಂಸತ್‍ನಲ್ಲಿ ತಡರಾತ್ರಿಯವರೆಗೂ ಚರ್ಚೆ ಮಾಡಲಾಗಿತ್ತು. ಬಳಿಕ ಮತದಾನ ಪ್ರಕ್ರಿಯೆಗೆ ಅವಕಾಶ ನೀಡಲಾಗಿತ್ತು.

ಮತದಾನ ಪ್ರಕ್ರಿಯೆ ವೇಳೆ ಜಸ್ಟಿನ್ ಟ್ರುಡೋ ಅವರು ಒಂದು ಚಾಕಲೇಟ್ ಬಾರ್ ತಿಂದಿದ್ದಾರೆ. ಇದನ್ನು ನೋಡಿದ ವಿರೋಧ ಪಕ್ಷದ ಸಂಸದ ಸ್ಕಾಟ್ ರೀಡ್ ಅವರು, ಪ್ರಧಾನಿ ಜಸ್ಟಿನ್ ಟ್ರುಡೋ ಅವರು ತಮ್ಮ ಕೆಸ್ಕ್‍ನಲ್ಲಿ ಚಾಕಲೇಟ್ ಬಚ್ಚಿಟ್ಟಿದ್ದಾರೆ ಎಂದು ಸಂಸತ್ ಗಮನಕ್ಕೆ ತಂದರು.

ಪ್ರಧಾನಿ ಈಗಾಗಲೇ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಸಂಸತ್‍ನಲ್ಲಿ ಸಂಸದರು ಕೇವಲ ನೀರು ಮಾತ್ರ ಕುಡಿಯಬಹುದಾಗಿದೆ ಎನ್ನುವ ನಿಯಮ ಮೀರಿ ಚಾಕಲೇಟ್ ತಿಂದಿದ್ದಾರೆ ಎಂದು ಸಂಸದ ಸ್ಕಾಟ್ ರೀಡ್ ಆರೋಪಿಸಿದರು.

ತಕ್ಷಣವೇ ಎಚ್ಚೆತ್ತುಕೊಂಡ ಜಸ್ಟಿನ್ ಟ್ರುಡೋ, ನಾನು ಚಾಕಲೇಟ್ ತಿಂದಿದಕ್ಕೆ ಸಂಸತ್‍ನ ಕ್ಷಮೆ ಯಾಚಿಸುತ್ತೇನೆ ಎಂದು ಎರಡು ಬಾರಿ ಪುನರುಚ್ಚರಿಸಿದರು. ಬಳಿಕ ಸ್ಪೀಕರ್ ಜೆಫ್ ರೇಗರ್, ಸಂಸತ್ ಭವನದ ಒಳಗೆ ಆಹಾರ ಪದಾರ್ಥ ತರಲು ಅವಕಾಶವಿಲ್ಲ ಎಂದು ಮತ್ತೆ ನಿಮಗೆ ತಿಳಿಸಬೇಕೇ ಎಂದು ಬೇಸರ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *