ನಿನ್ನ ಕಾಲು ಮುರಿತೀನಿ ನೋಡು: ಕೇಂದ್ರ ಸಚಿವನ ಧಮ್ಕಿ ವಿಡಿಯೋ ವೈರಲ್!

ಕೋಲ್ಕತ್ತ: ಪಶ್ಚಿಮ ಬಂಗಾಳದ ಅಸನ್ಸೋಲ್ ಪ್ರದೇಶದಲ್ಲಿ ನಡೆದ ಅಂಗವಿಕಲರ ಸಮಾವೇಶದಲ್ಲಿ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ವ್ಯಕ್ತಿಯೊಬ್ಬರಿಗೆ ನಿನ್ನ ಕಾಲನ್ನು ಮುರಿಯುತ್ತೇನೆ ಎಂದು ಧಮ್ಕಿ ಹಾಕಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಅಸನ್ಸೋಲ್ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಗಾಲಿಕುರ್ಚಿ ಮತ್ತು ಪರಿಕರಗಳನ್ನು ವಿತರಿಸುವ ‘ಸಾಮಾಜಿಕ ಅಧಿಕಾರಿತಾ ಶಿವಾರ್’ ಸಮಾರಂಭಕ್ಕೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ರಾಜ್ಯ ಸಚಿವ ಬಬುಲ್ ಸುಪ್ರಿಯೋರನ್ನು ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಸಚಿವರು ಭಾಷಣ ಮಾಡುತ್ತಿರುವಾಗ ಓರ್ವ ವ್ಯಕ್ತಿ ಅಡ್ಡಾ-ದಿಡ್ಡಿಯಾಗಿ ಓಡಾಡುತ್ತಿದ್ದನು. ಇದನ್ನು ಪ್ರಶ್ನಿಸಿದ ಅವರು ಏಕೆ ಓಡಾಡುತ್ತಿದ್ದೀಯಾ? ಸುಮ್ಮನೇ ಕುಳಿತುಕೋ ಎಂದು ಹೇಳಿದರು.

ಸಚಿವರ ಮಾತಿಗೂ ಬೆಲೆಕೊಡದ ಆತ ಪುನಃ ಅದೇ ರೀತಿ ಮಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಸಚಿವರು ನಿನಗೇನಾಗಿದೆ? ಏನಾದರೂ ಸಮಸ್ಯೆ ಇದೆಯಾ? ನೀನು ಸುಮ್ಮನೆ ಕುಳಿತುಕೊಳ್ಳದಿದ್ದರೆ, ನಿನ್ನ ಕಾಲನ್ನು ಮುರಿಯುತ್ತೇನೆ ನೋಡು ಎಂದು ಹೇಳಿದ್ದಲ್ಲದೇ, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಆ ವ್ಯಕ್ತಿ ಪುನಃ ಸಭೆಯಲ್ಲಿ ಓಡಾಡಿದರೆ ಅವನ ಕಾಲನ್ನು ಮುರಿದು ಊರುಗೋಲು ಕೊಡಿ ಎಂದು ಸೂಚಿಸಿದ್ದಾರೆ.

ಬಹಿರಂಗ ಸಭೆಯಲ್ಲಿ ವ್ಯಕ್ತಿಯೊಬ್ಬರಿಗೆ ಕಾಲು ಮುರಿಯುತ್ತೇನೆ ನೋಡು ಎಂದ ಸಚಿವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿ ಕೇಂದ್ರ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಯಾವಾಗಲೂ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಸಚಿವರು ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಮೊದಲು ಬಹಿರಂಗ ಸಭೆಯಲ್ಲಿ ವ್ಯಕ್ತಿಯೊಬ್ಬರ ಚರ್ಮ ಸುಲಿಯುತ್ತೇನೆ ನೋಡಿ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *