ಸಿಡಿ ಕೇಸ್ ಕ್ಲಿಯರ್ ಆಗುತ್ತೆ – ರಮೇಶ್ ಪರ ಸಹೋದರ ಬಾಲಚಂದ್ರ ಜಾರಕಿಹೊಳಿ ಬ್ಯಾಟಿಂಗ್

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೇಲೆ ಇರುವ ಸಿಡಿ ಪ್ರಕರಣ ಕ್ಲಿಯರ್ ಆಗುತ್ತಿದೆ. ಇದರಿಂದಾಗಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣ ಆದ್ಮೇಲೆ ಅದೇ ನೆಪವಿಟ್ಟು ರಮೇಶ್ ಜಾರಕಿಹೊಳಿ ಸಚಿವ ಸ್ಥಾನವನ್ನು ತೊರೆದರು. ಈಗ ಸಿಡಿ ಕೇಸ್ ಮುಗಿಯಲು ಬರುತ್ತಿದೆ. ಹೈಕೋರ್ಟ್‍ಗೆ ಪಿಐಎಲ್ ಹಾಕಿದರೂ, ತೀರ್ಪು ಬಂದ ಬಳಿಕ ಸುಪ್ರೀಂಕೋರ್ಟ್‍ಗೆ ಹೋದರು. ಸುಪ್ರೀಂಕೋರ್ಟ್ ಸಹ ವಾಪಸ್ ಹೈಕೋರ್ಟ್‍ನಲ್ಲಿ ನಿರ್ಧಾರ ತೆಗೆದುಕೊಳ್ಳಲು ಹೇಳಿತು. ಕಳೆದ ತಿಂಗಳ 10 ರಂದು ಆ ಪಿಐಎಲ್ ಡಿಸ್ಮಿಸ್ ಆಗಿದೆ. ಮುಖ್ಯ ಅರ್ಜಿ ಡಿಸ್ಮಿಸ್ ಆಯ್ತು, ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ರಿಪೋರ್ಟ್ ಸಬ್ಮಿಟ್ ಮಾಡಿದರು. ಸಿಡಿ ಕೇಸ್ ಬಿ-ರಿಪೋರ್ಟ್‍ನಲ್ಲಿ ಹೆಚ್ಚು ಕಡಿಮೆ ಟ್ರ್ಯಾಪ್ ಅಂತಾ ಇದೆ. ಹೆಚ್ಚು ಕಡಿಮೆ ರಮೇಶ್ ಅವರ ಮೇಲೆ ಯಾವುದೂ ಕೇಸ್ ಇಲ್ಲ ಎಂದು ಹೇಳಿದರು.

ಜಾರಕಿಹೊಳಿ ವಿರುದ್ಧ ಸಣ್ಣಪುಟ್ಟ ಬೇರೆ ಬೇರೆ ಯಾವುದೋ ಕೇಸ್ ಇವೆ. ರಮೇಶ್ ಜಾರಕಿಹೊಳಿ ಅವರ ಸಿಡಿ ಕೇಸ್ ಕ್ಲಿಯರ್ ಆಗಿದೆ. ಪಕ್ಷದಲ್ಲೂ ಅದನ್ನೇ ಹೇಳುತ್ತಿದ್ದರು, ಕೇಸ್ ಕ್ಲಿಯರ್ ಆದ್ಮೇಲೆ ಮಾಡೋಣ ಅಂತಾ. ಆದಷ್ಟು ಬೇಗ ಒಳ್ಳೆಯದಾಗಲಿ ಅಂತಾ ನಾವು ಹಾರೈಸುತ್ತೇವೆ ಎಂದರು. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಪೊಲೀಸ್‍ಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ

ಹೈಕಮಾಂಡ್ ಜೊತೆ ನಾವೇನೂ ಮಾತನಾಡಿಲ್ಲ. ರಮೇಶ್ ಅವರಿಗೆ ಒಳ್ಳೆಯದಾಗಲಿ ಅಂತಾ ಹಾರೈಸುತ್ತೇವೆ. ರಮೇಶ್ ಜಾರಕಿಹೊಳಿಗೆ ಒಳ್ಳೆಯದಾಗುತ್ತೆ ಅಂತಾ ಆಸೆ ಇಟ್ಟುಕೊಂಡಿದ್ದೇವೆ. ಏಪ್ರಿಲ್‍ನಲ್ಲಿ ಸಂಪುಟ ವಿಸ್ತರಣೆ ಮಾಡಬಹುದು ಅಂತಾ ಹೇಳ್ತಿದ್ದಾರೆ. ಆಗ ಅವಕಾಶ ಸಿಗಬಹುದು, ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಶ್ಮೀರ ಪಂಡಿತರ ಹತ್ಯಾಕಾಂಡ – ಎಸ್‌ಐಟಿ ತನಿಖೆಗೆ ನಿರ್ದೇಶನ ನೀಡಿ: ರಾಷ್ಟ್ರಪತಿಗಳಿಗೆ ಪತ್ರ

ಪಂಚರಾಜ್ಯ ಚುನಾವಣೆ ಬಳಿಕ ಹೊಸ ಮುಖ್ಯಮಂತ್ರಿ ಆಯ್ಕೆ ಸಂಬಂಧ ನಾಯಕರು ಬ್ಯುಸಿ ಇದ್ದಾರೆ. ಮಾರ್ಚ್ 25ರವರೆಗೂ ಎಲ್ಲರೂ ಹೆಚ್ಚು ಕಡಿಮೆ ಬ್ಯುಸಿ ಇದ್ದಾರೆ. ಮಾರ್ಚ್ 25ರ ಬಳಿಕ ಸಿಎಂ ದೆಹಲಿಗೆ ಹೋಗ್ತಾರೆ. ಹೈಕಮಾಂಡ್ ನಾಯಕರ ಅನುಮತಿ ಪಡೆದು ಏಪ್ರಿಲ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಆಗುವ ನಿರೀಕ್ಷೆ ಇದೆ. ಬೆಳಗಾವಿ ಜಿಲ್ಲೆಗೆ ಎಷ್ಟು ಸ್ಥಾನ ಕೊಡ್ತಾರೆಂಬುದು ಹೈಕಮಾಂಡ್, ಸಿಎಂಗೆ ಬಿಟ್ಟ ವಿಚಾರವಾಗಿದೆ. ಎಷ್ಟು ಮಂದಿಗೆ ಮಾಡ್ತಾರೆ ಎಷ್ಟು ಮಂದಿಯನ್ನು ಬಿಡ್ತಾರೆ ಗೊತ್ತಿಲ್ಲ. ಹೈಕಮಾಂಡ್, ಸಿಎಂ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧವಾಗಿರಬೇಕಾಗುತ್ತೇವೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *