ಸಿಎಂ ಕಾರ್ಯವೈಖರಿಗೆ ಕೆಲ ಸಚಿವರಿಂದ ಅಸಮಾಧಾನ

ಬೆಂಗಳೂರು: ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಬಿಎಸ್‍ವೈ ಕಾರ್ಯವೈಖರಿ ಬಗ್ಗೆ ಕೆಲ ಸಚಿವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಾಠಿ ಕೈಗೆತ್ತಿಕೊಳ್ಳಬೇಡಿ ಎಂದು ಪೊಲೀಸರಿಗೆ ಸೂಚಿಸಿದ್ದು ತಪ್ಪು. ಅವತ್ತು ಆಶಾ ಕಾರ್ಯಕರ್ತೆ ಮೇಲೆ ದಾಳಿ ನಡೆದಾಗಲೇ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಕೆಲ ಸಚಿವರು ಅಸಮಾಧನ ತೋರ್ಪಡಿಸಿದ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಕೊರೊನಾ ಲಾಕ್‍ಡೌನ್ ವಿಚಾರದಲ್ಲಿ ಮೃದು ಧೋರಣೆ ಬೇಡ. ಇನ್ನೇನಿದ್ದರೂ ದಂಡಂ ದಶಗುಣಂ ಇರಬೇಕು ಎಂದು ಸಚಿವರಾದ ಅಶೋಕ್, ಸಿಟಿ ರವಿ, ಶ್ರೀರಾಮುಲು ಹೇಳಿದ್ದಾರೆ.

ಬೆನ್ನಲ್ಲೇ, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ, ಅಧಿಕಾರ ನೀಡುವ ಬಗ್ಗೆ ಸಿಎಂ ಘೋಷಣೆ ಮಾಡಿದ್ದಾರೆ. ಡೋಂಟ್ ವರಿ, ಇನ್ನು ಮುಂದೆ ಒಂದು ಸಣ್ಣ ಗಲಾಟೆ ಆಗಲು ಅವಕಾಶ ಕೊಡಲ್ಲ ಎಂದು ಬಿಎಸ್‍ವೈ ಭರವಸೆ ನೀಡಿದ್ದಾರೆ ಅಂತಾ ತಿಳಿದುಬಂದಿದೆ.

ಪಾದರಾಯನಪುರ ಗಲಭೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ದೃಷ್ಟಿಯಿಂದ, ಕೇರಳ ಮತ್ತು ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರಿವಾಜ್ಞೆ ಜಾರಿ ಮಾಡಲು ಸಿದ್ಧತೆ ನಡೆಸಿದೆ.

ಇನ್ನೆರಡು ದಿನಗಳಲ್ಲಿ ಕರ್ನಾಟಕ ರಾಜ್ಯ ಸಾಂಕ್ರಾಮಿಕ ರೋಗಗಳ ಅಧಿನಿಯಮದ ಹೆಸರಿನಲ್ಲಿ ಸುಗ್ರಿವಾಜ್ಞೆ ಹೊರಡಿಸುವ ಸಾಧ್ಯತೆಯಿದೆ. ಕೊರೊನಾ ಲಾಕ್‍ಡೌನ್ ನಿಯಮ ಉಲ್ಲಂಘಿಸಿ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಗಲಭೆ ಎಬ್ಬಿಸಿದ್ರೆ ಅಂಥವರಿಗೆ 2 ವರ್ಷ ಶಿಕ್ಷೆ ವಿಧಿಸುವ ಮತ್ತು ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಕಾನೂನು ಬದ್ಧ ಸಂಸ್ಥೆಗಳಿಗೆ ಇರಲಿದೆ.

ಕೊರೋನಾ ತಪಾಸಣೆಗೆ ತೆರಳುವ ವೈದ್ಯರು, ಆಶಾ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳನ್ನು ಸಹಿಸಲ್ಲ, ಹಲ್ಲೆಗೆ ಮುಂದಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ, ಗಲಭೆ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ.

Comments

Leave a Reply

Your email address will not be published. Required fields are marked *