ಬುಧವಾರ ಸಂಪುಟ ವಿಸ್ತರಣೆ – ಇಬ್ಬರಿಗೆ ಮಂತ್ರಿಗಿರಿ

ಬೆಂಗಳೂರು: ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ಸಂಪುಟ ವಿಸ್ತರಣೆಯಾಗಲಿದ್ದು, ಇಬ್ಬರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇಂದು ರಾಜಭವನಕ್ಕೆ ಭೇಟಿ ನೀಡಿದ ಸಿಎಂ ಕುಮಾರಸ್ವಾಮಿ, ರಾಜ್ಯಪಾಲ ವಿ.ಆರ್ ವಾಲಾರ ಜೊತೆ ಸಂಪುಟ ವಿಸ್ತರಣೆ ಸಂಬಂಧ ಮಾತನಾಡಿದ್ದಾರೆ. ಈ ವೇಳೆ ಬುಧವಾರ ಸಂಪುಟ ವಿಸ್ತರಣೆಗೆ ರಾಜ್ಯಪಾಲರು ಸಮಯ ಕೊಟ್ಟಿದ್ದಾರೆ. ಹೀಗಾಗಿ ಬುಧವಾರ ಬೆಳಗ್ಗೆ 11.30 ಕ್ಕೆ ಇಬ್ಬರು ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ರಾಣೆಬೆನ್ನೂರು ಶಾಸಕ ಆರ್ ಶಂಕರ್ ಹಾಗೂ ಮುಳಬಾಗಿಲು ಶಾಸಕ ನಾಗೇಶ್ ಇವರಿಬ್ಬರೂ ಪಕ್ಷೇತರ ಶಾಸಕರಾಗಿದ್ದಾರೆ. ದೋಸ್ತಿ ಸರ್ಕಾರ ಉಳಿಸಿಕೊಳ್ಳುವ ಯತ್ನ ನಡೆಸಲಾಗುತ್ತಿದ್ದು, ಹೀಗಾಗಿ ಪಕ್ಷೇತರರನ್ನ ಹಿಡಿದಿಟ್ಟುಕೊಳ್ಳಲು ಪ್ಲಾನ್ ರೂಪಿಸಲಾಗಿದೆ ಎನ್ನಲಾಗಿದೆ.

ಕುಂದಗೋಳ ಶಾಸಕ ಶಿವಳ್ಳಿ ನಿಧನದಿಂದ ತೆರವಾಗಿರುವ ಹಿನ್ನೆಲೆಯಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಿದ್ದರು. ಆದರೆ ರಾಮಲಿಂಗಾ ರೆಡ್ಡಿ ಅವರಿಗೆ ಮಂತ್ರಿ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ.

ಸದ್ಯ ಇಬ್ಬರಿಗೆ ಅವಕಾಶ ನೀಡಲಾಗುತ್ತಿದ್ದು, ಅತೃಪ್ತ ಶಾಸಕರಿಗೆ ಒಬ್ಬರಿಗೆ ಅವಕಾಶ ನೀಡಿದರೆ ಇನ್ನೊಬ್ಬರಿಗೆ ಬೇಸರವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರಿಗೆ ಸದ್ಯಕ್ಕೆ ಸಚಿವ ಭಾಗ್ಯ ಇಲ್ಲ ಎಂದು ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *