ಪ್ರಚೋದನಕಾರಿ ಹೇಳಿಕೆ- ಎಐಎಂಐಎಂ ವಕ್ತಾರನ ವಿರುದ್ಧ ಕೇಸ್

ಕಲಬುರಗಿ: ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಚೋದನಾತ್ಮಕಾರಿ ಹೇಳಿಕೆ ನೀಡಿದ, ಮಹಾರಾಷ್ಟ್ರ ಮಾಜಿ ಶಾಸಕ ಹಾಗೂ ಎಐಎಂಐಎಂ ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಕಲಬುರಗಿ ಪೀರ್ ಬಂಗಾಲಿ ಮೈದಾನದಲ್ಲಿ ಸಿಎಎ ಖಂಡಿಸಿ ನಡೆದ ಸಮಾವೇಶದಲ್ಲಿ ವಾರಿಸ್ ಪಠಾಣ್ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಪಠಾಣ್ ಹೇಳಿಕೆ ವಿರುದ್ಧ ನ್ಯಾಯವಾದಿ ಶ್ವೇತಾಸಿಂಗ್ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆಯ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ದೂರಿನ ಪ್ರತಿಯಲ್ಲಿ ಏನಿದೆ?
ಫೆಬ್ರವರಿ 15ರಂದು ನಡೆದ ಈ ಕಾರ್ಯಕ್ರಮದಲ್ಲಿ ವಾರಿಸ್ ತಮ್ಮ ಭಾಷಣದ ವೇಳೆ, ಕೇಳಿದರೆ ನಮಗೆ ಸ್ವಾತಂತ್ರ್ಯ ಸಿಗುತ್ತಿಲ್ಲ, ಹೀಗಾಗಿ ನಾವು ಅದನ್ನು ಕಸಿದು ಪಡೆಯಬೇಕಾಗುತ್ತದೆ. ಆ ಸಮಯ ಇದೀಗ ಬಂದಿದೆ. ಈಗಾಗಲೇ ನಮ್ಮ ಹೆಣ್ಣು ಸಿಂಹಳಿಯರು ಮಾತ್ರ ಬೀದಿಗಿಳಿದಿದ್ದಾರೆ. ಕೇವಲ ನಮ್ಮ ತಾಯಂದಿರು ಸಹೋದರಿಯರು ಬೀದಿಗೆ ಇಳಿದಿರುವದನ್ನು ನೋಡಿಯೇ ನಿಮಗೆ ಎಲ್ಲೆಂದರಲ್ಲಿ ಬಿಸಿ ಆಗಲಾರಂಭಿಸಿದೆ. ಇನ್ನು ನಾವು ಗಂಡಸರು ಬಂದರೆ ನಿಮ್ಮ ಸ್ಥಿತಿ ಏನಾಗಬಹುದು ಕಲ್ಪಿಸಿಕೊಳ್ಳಿ, ಈ ದೇಶದ 15 ಕೋಟಿ ಮುಸ್ಲಿಮರು ಒಂದಾಗಿ ಬಂದರೆ 100ಕೋಟಿ ಹಿಂದುಗಳು ಯಾವುದೇ ಲೆಕ್ಕಕ್ಕೆ ಸಿಗದೆ ಹೋಗುತ್ತಾರೆ ಎಂದು ಭಾಷಣ ಮಾಡಿದ್ದರು. ಈ ವೇಳೆ ಪಕ್ಷದ ಸಂಸ್ಥಾಪಕ ಅಸಾದುದ್ದಿನ್ ಓವೈಸಿ ಸಹ ಭಾಗವಹಿಸಿದ್ದರು.

ಈ ಮೂಲಕ ಹಿಂದೂ-ಮುಸ್ಲಿಂ ಭಾವೈಕತೆಗೆ ಧಕ್ಕೆ ತರುವ ಪ್ರಚೋದನಾತ್ಮಕಾರಿ ಭಾಷಣ ಮಾಡಿದ್ದರು. ಹೀಗಾಗಿ ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಕೂಡಲೇ ಎಫ್‍ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಿದ ಹಿನ್ನೆಲೆ ಮಧ್ಯರಾತ್ರಿಯಲ್ಲೇ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *