ಮಂಗಳೂರಿಗೆ ಬರುತ್ತಿರುವ ಎಲ್ಲ ವಾಹನಗಳಿಗೆ ತಡೆ – ಸುಳ್ಳು ನೆಪ ಹೇಳಿದ್ದ ಯುವಕರಿಗೆ ಬಿತ್ತು ಲಾಠಿ ಏಟು

ಮಂಗಳೂರು: ಪೌರತ್ವ ಕಾಯ್ದೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಇಂದು ಮಂಗಳೂರು ನಗರಕ್ಕೆ ಬರುತ್ತಿರುವ ಎಲ್ಲ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೈಕಾಂಪಾಡಿಯಲ್ಲಿ ವಾಹನಗಳನ್ನು ತಡೆಯುತ್ತಿದ್ದಾರೆ. ಕೇರಳ ಕಡೆಯಿಂದ ಬರುತ್ತಿರುವ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದಾರೆ. ಈಗಾಗಲೇ 48 ಗಂಟೆಗಳ ಕಾಲ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ಡಿ.22ರ ಮಧ್ಯರಾತ್ರಿಯವರೆಗೆ ನಗರ ಪೊಲೀಸ್ ಆಯುಕ್ತ ಹರ್ಷ ಕರ್ಫ್ಯೂ ವಿಧಿಸಿದ್ದಾರೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್ ಹರ್ಷ ಮನೆಬಿಟ್ಟು ಹೊರ ಬರದಂತೆ ಜನರಿಗೆ ಸೂಚನೆ ನೀಡಿದ್ದಾರೆ. ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಹೊರತು ಮಂಗಳೂರಿನಲ್ಲಿ ಎಲ್ಲವೂ ಬಂದ್ ಆಗಿದೆ. ಐಜಿಪಿ ದಯಾನಂದ ನೇತೃತ್ವದಲ್ಲಿ ಭದ್ರತೆಗಾಗಿ ಮೂರು ಜಿಲ್ಲೆಗಳ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ.

ಹೊರ ಬಾರದಂತೆ ಮೈಕ್ ಮೂಲಕ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರೂ ಇದು-ಅದು ನೆಪ ಹೇಳಿ ಇಂದು ಬೆಳಗ್ಗೆ ಯುವಕರು ಹೊರಬರುತ್ತಿದ್ದರು. ಹೀಗಾಗಿ ಸುಳ್ಳು ನೆಪ ಹೇಳಿದ ಯುವಕರಿಗೆ ಪೊಲೀಸರು ಲಾಠಿ ಏಟು ನೀಡಿ ಕಳುಹಿಸಿದ್ದಾರೆ.

ಪ್ರತಿಭಟನೆ ಘರ್ಷಣೆಗೆ ತಿರುಗಿದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಪೊಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕುದ್ರೋಳಿ ನಿವಾಸಿ ನೌಶೀನ್ ಅವಿವಾಹಿತನಾಗಿದ್ದು ಗ್ಯಾರೇಜ್‍ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರೆ, ಕಂದಕ್ ನಿವಾಸಿ ಅಬ್ದುಲ್ ಜಲೀಲ್ ಮಂಗಳೂರಿನ ದಕ್ಕೆಯಲ್ಲಿ ಮೀನು ಮಾರಾಟ ಮಾಡುವ ಸಣ್ಣ ವ್ಯಾಪಾರಿಯಾಗಿದ್ದು, ಪತ್ನಿ ಇಬ್ಬರು ಮಕ್ಕಳಿದ್ದಾರೆ.

Comments

Leave a Reply

Your email address will not be published. Required fields are marked *