ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ: ಸಿ.ಟಿ.ರವಿ

ನವದೆಹಲಿ: ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಪಂಜಾಬ್‌ ರ‍್ಯಾಲಿಗೆ ತೆರಳುತ್ತಿದ್ದ ಪ್ರಧಾನಿ ಮೋದಿ(Narendra Modi) ಅವರು ಫ್ಲೈಓವರ್‌ನಲ್ಲಿ 20 ನಿಮಿಷ ಸಿಲುಕಿದ್ದಕ್ಕೆ ಭದ್ರತಾ ಲೋಪವೇ(security breach) ಕಾರಣ ಎಂದು ಸಿ.ಟಿ.ರವಿ ಟ್ವೀಟ್‌ ಮಾಡಿ ಖಂಡಿಸಿದ್ದಾರೆ. ಪಂಜಾಬ್‌ನ ಫ್ಲೈಓವರ್‌ನಲ್ಲಿ ಪಿಎಂ ಮೋದಿ ಅವರು ಸಿಲುಕಿಕೊಂಡಿದ್ದು ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಿದಂತಿದೆ. ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರದ ದುರಹಂಕಾರದಿಂದ ಈ ಭದ್ರತಾ ಲೋಪ ಉಂಟಾಗಿದೆ. ಮುಂಬರುವ ಚುನಾವಣೆಯಲ್ಲಿ ನಕಲಿ ಗಾಂಧಿಗಳಿಗೆ ಪಂಜಾಬ್‌ನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ

ತಾನು ಸುರಕ್ಷಿತವಾಗಿ ತಲುಪಿದ್ದೇನೆ ಎಂಬ ಪ್ರಧಾನಿ ಮೋದಿ ಅವರ ಟ್ವೀಟ್‌ ಅನ್ನು ಹಂಚಿಕೊಂಡಿರುವ ಸಿ.ಟಿ.ರವಿ, ಸೋನಿಯಾ ಮಾತೆಯನ್ನು ಮೆಚ್ಚಿಸಲು ಹೋಗಿ ಪಂಜಾಬ್‌ ಸಿಎಂ ಚನ್ನಿ ಅವರು ಭಾರತ ಮಾತೆಗೆ ದ್ರೋಹ ಬಗೆದಿದ್ದಾರೆ. ಕಾಂಗ್ರೆಸ್‌ನ ಈ ಹೇಯ ಕೃತ್ಯವನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ ಮತ್ತು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ನ ಇಬ್ಬರು ನಾಯಕರು ಮಾತನಾಡಿಕೊಳ್ಳುತ್ತಿರುವ ವೀಡಿಯೋವನ್ನು ಹಂಚಿಕೊಂಡಿರುವ ಸಿ.ಟಿ.ರವಿ, ಫ್ಲೈಓವರ್‌ನಲ್ಲಿ ಇಂದು ಆದ ಘಟನೆ ಸಂಬಂಧ ಕಾಂಗ್ರೆಸ್‌ ನಾಯಕರೊಂದಿಗೆ ರಾಹುಲ್‌ ಗಾಂಧಿಯವರು ರಹಸ್ಯ ಸಭೆಯನ್ನೇನಾದರೂ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

ಪಂಜಾಬ್‌ನಲ್ಲಿ ರ‍್ಯಾಲಿ ಮತ್ತು ಹುತಾತ್ಮರ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ಕಾರ್ಯಕ್ರಮ ಇಂದು ಆಯೋಜಿಸಲಾಗಿತ್ತು. ಕಾರಣಾಂತರಗಳಿಂದ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದು ಭದ್ರತೆ ಲೋಪ ಎಂದು ಪಂಜಾಬ್‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪಿಎಂ ಮೋದಿ ಹಾಗೂ ಬಿಜೆಪಿ ಸರ್ಕಾರ ಗಂಭೀರ ಆರೋಪ ಮಾಡಿತ್ತು. ಆದರೆ ಈ ಆರೋಪವನ್ನು ಪಂಜಾಬ್‌ ಕಾಂಗ್ರೆಸ್‌ ತಳ್ಳಿಹಾಕಿದೆ. ರ‍್ಯಾಲಿಯಲ್ಲಿ ಜನರೇ ಭಾಗವಹಿಸಿರಲಿಲ್ಲ. ಹೀಗಾಗಿ ಮೋದಿ ಅವರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

Comments

Leave a Reply

Your email address will not be published. Required fields are marked *