ನನ್ನನ್ನ ಜ್ಯೋತಿಷಿ ಎಂದು ಕರೆದರೂ ಪರವಾಗಿಲ್ಲ, ಪಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತೆ: ಸಿ.ಟಿ.ರವಿ

ಚಿಕ್ಕಮಗಳೂರು: ನನ್ನನ್ನ ಜ್ಯೋತಿಷಿ ಎಂದು ಕರೆದರೂ ಪರವಾಗಿಲ್ಲ. ಪಂಜಾಬ್‍ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭವಿಷ್ಯ ನುಡಿದಿದ್ದಾರೆ.

ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮೇಕೆದಾಟು ಪಾದಯಾತ್ರೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಸುಲಭವಾಗಿ ಆಗುವ ಕೆಲಸಕ್ಕೆ ತುಂಬಾ ಕಷ್ಟಪಡುತ್ತಿದ್ದಾರೆ. ಮೇಕೆದಾಟು ಯೋಜನೆಗೆ ಅಡ್ಡಿಯಾಗಿರುವುದು ತಮಿಳುನಾಡು ಸರ್ಕಾರ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಡಿಎಂಕೆ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮನವೊಲಿಸಿದರೆ ಕೆಲಸ ಸುಲಭವಾಗುತ್ತೆ. ಅದನ್ನ ಬಿಟ್ಟು ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ವ್ಯಂಗ್ಯವಾಡಿದರು. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಅಮಾನವೀಯ, ಇದೊಂದು ಅವೈಜ್ಞಾನಿಕ ಕ್ರಮ: ಎ.ಎಸ್.ಪೊನ್ನಣ್ಣ

ಇದೇ ವೇಳೆ, ಪಂಚರಾಜ್ಯ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಪಂಜಾಬಿನಲ್ಲಿ ಬಿಜೆಪಿ ಸುಧಾರಿಸುತ್ತದೆ. ಆದರೆ, ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತದೆ. ನನ್ನನ್ನ ಜ್ಯೋತಿಷಿ ಎಂದು ಬೇಕಾದರೂ ಕರೆಯಿರಿ. ರಾಜಕೀಯ ವಿಚಾರದಲ್ಲಿ ಆಳವಾದ ಜ್ಞಾನವಿರುವವನು ಅಂತನಾದ್ರು ಕರೆಯಿರಿ. ಇಲ್ಲಾ ಸಾಮಾನ್ಯ ಮತದಾರ ಎಂದಾದ್ರೂ ಕರೆಯಿರಿ. ಪಂಜಾಜ್ ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಮೇಕೆದಾಟು ಯೋಜನೆಗೆ ರಾಜ್ಯ ಬಿಜೆಪಿ ಸರ್ಕಾರ ಅಡ್ಡಿಪಡಿಸುತ್ತಿಲ್ಲ. ಈಗಾಗಲೇ ಕೇಂದ್ರವೂ ತಾತ್ವಿಕ ಒಪ್ಪಿಗೆ ನೀಡಿದೆ. ಮೇಕೆದಾಟು ಯೋಜನೆಗೆ ಅಡ್ಡಿಯಾಗಿರುವುದು ತಮಿಳುನಾಡು ಸರ್ಕಾರ. ಡಿಎಂಕೆ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್ ಪಾಲು ಕೂಡ ಇದೆ. ಕಾಂಗ್ರೆಸ್ ನಾಯಕರು ತಮಿಳುನಾಡು ಸರ್ಕಾರದ ಮನವೊಲಿಸಿದರೆ ಸಾಕು ಎಂದರು.

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಹೆಸರು ಪ್ರಧಾನಿ ಹುದ್ದೆಗೆ ಕೇಳಿಬಂದಿತ್ತು. ಡಿ.ಕೆ.ಶಿವಕುಮಾರ್ ಅವರು ಕೇಂದ್ರದ ನಾಯಕರುಗಳಿಗೆ ಸಹಾಯ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಮಾತನ್ನ ತಮಿಳುನಾಡಿನವರು ಕೇಳುತ್ತಾರೆ. ತಮಿಳುನಾಡು ಸರ್ಕಾರದ ಮನವೊಲಿಸಿದರೆ ಪಾದಯಾತ್ರೆ ನಡೆಸುವ ಪ್ರಮೇಯವೇ ಇರಲ್ಲ ಎಂದು ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದರು.

ಸುಲಭದ ಕೆಲಸ ಬಿಟ್ಟು ನಿಯಮ ಉಲ್ಲಂಘಿಸೋದು, ಕೊರೊನಾ ಬರಿಸಿಕೊಳ್ಳುವುದು ಎಲ್ಲವೂ ಬೇಕಾ ಎಂದು ಪ್ರಶ್ನಿಸಿದರು. ಹೂ ಎತ್ತಿದ್ದಷ್ಟು ಸುಲಭದಲ್ಲಿ ಆಗುವ ಕೆಲಸಕ್ಕೆ ಕೊಡಲಿ ಏಕೆ ತೆಗೆದುಕೊಳ್ಳುತ್ತಿದ್ದಾರೆ. ಮೈ-ಕೈ ನೋವು ಏಕೆ ಮಾಡಿಕೊಳ್ಳುತ್ತಿದ್ದಾರೆ ಗೊತ್ತಿಲ್ಲ ಎಂದರು.

ತಮಿಳುನಾಡು ಸರ್ಕಾರ ನ್ಯಾಯಾಲಯದ ಮೊರೆ ಹೋಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬಳಿ ಮಾತನಾಡಿ ನಮ್ಮ ವಿರೋಧವಿಲ್ಲ ಎಂದು ನ್ಯಾಯಾಲಯಕ್ಕೆ ಒಂದು ಅಫಿಡವಿಟ್ ಸಲ್ಲಿಸಿದರೆ ಸಾಕು. ಇಬ್ಬರೂ ಬುದ್ಧಿವಂತರಿದ್ದಾರೆ. ಇಬ್ಬರಿಗೂ ತಿಳುವಳಿಕೆ ಇದೆ. ಅವರೂ ಕಷ್ಟಕ್ಕೆ ಸಿಗುವುದಲ್ಲದೆ, ಕಾರ್ಯಕರ್ತರನ್ನೂ ಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೋದಿ, ಯೋಗಿ ಫೋಟೋಗಳೊಂದಿಗೆ ಉಚಿತ ಆಹಾರ ಪ್ಯಾಕೆಟ್‍ಗಳನ್ನು ವಿತರಿಸುವಂತಿಲ್ಲ

ಪಾದಯಾತ್ರೆಯಿಂದ ತಮಿಳುನಾಡು ಒಪ್ಪಿಕೊಳ್ಳುತ್ತೆ ಅನ್ನೋದಾದರೆ ಅವರು ಚೆನ್ನೈವರೆಗೂ ಪಾದಯಾತ್ರೆ ಮಾಡಲಿ ಎಂದು ಸಲಹೆ ನೀಡಿದರು.

Comments

Leave a Reply

Your email address will not be published. Required fields are marked *