ಜನ್ರು ಕಷ್ಟದಲ್ಲಿದ್ದಾಗ ಬಾರದ ಕಣ್ಣೀರು ಈಗ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಬಂದಿದೆ: ಸಿ.ಟಿ ರವಿ ಟಾಂಗ್

ಶಿವಮೊಗ್ಗ: ಮಾಜಿ ಪ್ರಧಾನಿ ದೇವೇಗೌಡರು ಮಣ್ಣಿನ ಮಗ, ರೈತ ನಾಯಕ ಎಂದು ಟ್ಯಾಗ್ ಲೈನ್ ಇಟ್ಟುಕೊಂಡವರು. ಅವರಿಗೆ ಜನರು ಸಂಕಷ್ಟದಲ್ಲಿದ್ದಾಗ ಕಣ್ಣೀರು ಬಾರದೇ, ಈಗ ತಮ್ಮ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಕಣ್ಣೀರು ಬಂದಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಟಿ ರವಿ ಟೀಕಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಅಪಹಾಸ್ಯವಾಗಿದೆ. ಮಣ್ಣಿನ ಮಗ, ರೈತ ನಾಯಕ ಎಂದು ಟ್ಯಾಗ್ ಲೈನ್ ಇಟ್ಟುಕೊಂಡಿರುವ ದೇವೇಗೌಡರು, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಥವಾ ಯೋಧರು ವೀರ ಮರಣ ಹೊಂದಿದಾಗ ಅತ್ತಿರಲಿಲ್ಲ. ಜನರು ಸಂಕಷ್ಟದಲ್ಲಿದ್ದಾಗ ಕಣ್ಣೀರು ಬಾರದೇ, ಈಗ ತಮ್ಮ ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಕಣ್ಣೀರು ಬಂದಿದೆ. ಇದೊಂದು ಅಪಹಾಸ್ಯಕ್ಕೆ ಒಳಗಾದ ಹೈಡ್ರಾಮ ಎಂದು ದೇವೇಗೌಡರ ಕುಟುಂಬದ ಕಣ್ಣೀರಿಗೆ ಲೇವಡಿ ಮಾಡಿದ್ದಾರೆ. ಈ ರೀತಿ ನಟನೆ, ಮೊಮ್ಮಕ್ಕಳ ಭವಿಷ್ಯಕ್ಕೋ, ಜನರ ಬಗ್ಗೆ ಚಿಂತನೆಗೋ ಎಂದು ದೇವೇಗೌಡರೇ ಸ್ಪಷ್ಟಪಡಿಸಲಿ ಎಂದು ಟಾಂಗ್ ನೀಡಿದ್ದಾರೆ.

ಬಿಜೆಪಿ ಕೋರ್ ಕಮಿಟಿ ಸಭೆ ಈ ತಿಂಗಳ 18 ಮತ್ತು 19ಕ್ಕೆ ನಡೆಯಲಿದೆ. ಅಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ. ಚಿಕ್ಕಮಗಳೂರು ಹಾಗೂ ಉಡುಪಿ ಬಿಜೆಪಿಯ ಭದ್ರಕೋಟೆ. ಇಲ್ಲಿ ಆಕಾಂಕ್ಷಿಗಳು ಬಹಳ ಜನ ಇದ್ದಾರೆ. ನಮ್ಮ ಹೈಕಮಾಂಡ್ ತೀರ್ಮಾನವೇ ಅಂತಿಮ. ದೇಶದ ಹಾಗೂ ರಾಜ್ಯದ ಜನ ಬಿಜೆಪಿ ಜೊತೆಗಿದ್ದಾರೆ. ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕೆಂಬುದು ದೇಶದ ಜನರ ಬಯಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲೂ 1998 ರಿಂದಲೂ ನಂ.1 ಸ್ಥಾನದಲ್ಲಿ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅತಿರಥ ಮಹಾರಥರನ್ನು ಸೋಲಿಸಿ ಮನೆಗೆ ಕಳಿಸುತ್ತೇವೆ. 28ಕ್ಕೆ 28 ಸ್ಥಾನಗಳನ್ನು ಕೂಡ ಬಿಜೆಪಿಯೇ ಗೆಲ್ಲಲಿದೆ. ಜಾತಿ, ಕುಟುಂಬದ ಬಗ್ಗೆ ಚರ್ಚೆ ನಡೆಯದೇ, ಈಗ ದೇಶದ ಬಗ್ಗೆ ಚರ್ಚೆ ನಡೆಯುತ್ತಿದೆ. ಎಂಥಹ ನಾಯಕ ಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶ ಗೆಲ್ಲಬೇಕು ಎಂದರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಸಿ.ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *