ಚನ್ನಪಟ್ಟಣ ಉಪಚುನಾವಣೆ; ಕಾಂಗ್ರೆಸ್‌ ಸೇರ್ತಾರಾ ಸಿ.ಪಿ.ಯೋಗೇಶ್ವರ್‌?

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಕಣ ರಂಗೇರಿದೆ. ಬಿಜೆಪಿ ಪಾಳಯದಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಸಿ ವಿಫಲರಾಗಿರುವ ಸಿ.ಪಿ.ಯೋಗೇಶ್ವರ್‌ ಇಂದು ರಾತ್ರಿಯೇ ಕಾಂಗ್ರೆಸ್‌ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ಪಕ್ಷದಲ್ಲಿ ತಡರಾತ್ರಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಂಗಳವಾರ ರಾತ್ರಿಯೇ ಭೇಟಿ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಯೋಗೇಶ್ವರ್‌ಗೆ ಸಮಯ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಇಂದೇ ಸಿಪಿವೈ ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದೇ ವಿಚಾರವಾಗಿ, ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಸಚಿವರಾದ ಕೃಷ್ಣಬೈರೇಗೌಡ, ಜಮೀರ್ ಅಹ್ಮದ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿ ಮೂವರು ನಾಯಕರು ತೆರಳಿದ್ದಾರೆ.

ತಮ್ಮ ನಿವಾಸದಿಂದ ಹೊರಟು ರಹಸ್ಯ ಸ್ಥಳಕ್ಕೆ ಸಿ.ಪಿ.ಯೋಗೇಶ್ವರ್‌ ತೆರಳಿದ್ದಾರೆ ಎನ್ನಲಾಗಿದೆ.