ಕರ್ನಾಟಕ, ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತ – ಶಿವಸೇನೆ ವಿರುದ್ಧ ಪ್ರಯಾಣಿಕರ ಹಿಡಿಶಾಪ

ಚಿಕ್ಕೋಡಿ: ಶಿವಸೇನೆಯ ಪುಂಡಾಟಿಕೆ ರಾಜ್ಯದ ಗಡಿ ಪ್ರದೇಶದಲ್ಲಿ ಮುಂದುವರಿದಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪರಿಣಾಮ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತವಾಗಿದೆ.

ಶಿವಸೇನೆಯ ಕಿಡಿಗೇಡಿಗಳಿಂದ ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದ್ದಾರೆ. ಇಂದು ಮಹಾರಾಷ್ಟ್ರದ ಕೊಲ್ಲಾಪೂರದಲ್ಲಿ ಶಿವಸೇನೆಯ ಪುಂಡರು ಮತ್ತೆ ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಗಳ ಸಂಚಾರವನ್ನು ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ.

ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್‍ಗಳು ಕೂಡ ಸಂಚಾರ ನಿಲ್ಲಿಸಿರುವ ಕಾರಣ ಪ್ರಯಾಣಿಕರು ಸಾಕಾಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯ ಸಾರಿಗೆಯ ಬಸ್‍ಗಳು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ನಿಲ್ದಾಣದಲ್ಲಿ ಅಂತಿಮಗೊಳಿಸಲಾಗಿದೆ. ಮಹಾರಾಷ್ಟ್ರದ ಸಾಂಗಲಿ, ಮೀರಜ್, ಕೊಲ್ಹಾಪುರ, ಇಚಲಕರಂಜಿ, ಮತ್ತು ಸೊಲ್ಲಾಪುರಗಳಿಗೆ ತೆರಳುತ್ತಿದ್ದ ಬಸ್ ಸಂಚಾರ ಸದ್ಯ ಸ್ತಬ್ಧವಾಗಿದೆ. ಇದನ್ನು ಓದಿ: ಮುಂದುವರಿದ ಶಿವಸೇನೆ ಪುಂಡಾಟ – ಗಡಿಯಲ್ಲಿ ಕಟ್ಟೆಚ್ಚರ

ಕರ್ನಾಟಕ ಹಾಗೂ ಮಹಾರಾಷ್ಟ್ರ ಸಾರಿಗೆಯ ಸುಮಾರು 700 ಕ್ಕೂ ಬಸ್‍ಗಳ ಸಂಚಾರ ಸ್ಥಗಿತವಾಗಿದೆ. ಇಂದು ರಜೆ ದಿನವಾದ ಕಾರಣ ಸಾವಿರಾರು ಪ್ರಯಾಣಿಕರು ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ನಗರಗಳಿಗೆ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಶಿವಸೇನೆಯ ಪುಂಡರಿಂದಾಗಿ ಉಭಯ ರಾಜ್ಯಗಳ ಪ್ರಯಾಣಿಕರು ಕಷ್ಟ ಅನುಭವಿಸುತ್ತಿದ್ದಾರೆ. ಇದೇ ವೇಳೆ ಬಸ್ ಸಂಚಾರ ಸ್ಥಗಿತಗೊಳ್ಳಲು ಕಾರಣವಾದ ಶಿವಸೇನೆ ವಿರುದ್ಧ ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *