ಶಾಸ್ತ್ರಿ ಭವನಕ್ಕೆ ಬೆಂಕಿ- ಸುಟ್ಟ ಫೈಲ್‍ಗಳು ಮೋದಿಯನ್ನು ಕಾಪಾಡಲ್ಲ ಎಂದ್ರು ರಾಹುಲ್!

ನವದೆಹಲಿ: ಪ್ರಮುಖ ಸಚಿವಾಲಯಗಳಿರುವ ದೆಹಲಿಯ ಪ್ರಸಿದ್ಧ ಶಾಸ್ತ್ರಿ ಭವನದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಅಗ್ನಿ ಅನಾಹುತದ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಸುಮಾರು 1.45ರ ಹೊತ್ತಿಗೆ ಶಾಸ್ತ್ರಿ ಭವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿ 7 ವಾಹನಗಳನ್ನು ಬಳಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಈ ಅವಘಡ ನಡೆಯಲು ಕೇಂದ್ರ ಸರ್ಕಾರವೇ ಕಾರಣ, ಮೋದಿ ಅವರೇ ನೀವು ಹೀಗೆ ಫೈಲ್‍ಗಳನ್ನು ಸುಟ್ಟ ಮಾತ್ರಕ್ಕೆ ನಿಮ್ಮ ಸರ್ಕಾರದ ಅಕ್ರಮಗಳು ಬೆಳಕಿಗೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಮೋದಿ ವಿರುದ್ಧ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಪ್ರಧಾನಿ ಮೋದಿ ಅವರೇ ಕಡತಗಳನ್ನು ಹೀಗೆ ವ್ಯವಸ್ಥಿತವಾಗಿ ಸುಡುವುದರಿಂದ ನಿಮ್ಮ ಸರ್ಕಾರದ ಅಕ್ರಮಗಳು ಬಯಲಿಗೆ ಬರುವುದಿಲ್ಲ ಎಂದು ಅಂದುಕೊಳ್ಳಬೇಡಿ. ಅಧಿಕಾರದಿಂದ ಇಳಿಯುವ ದಿನಗಳು ಹತ್ತಿರ ಬರುತ್ತಿವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‍ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರೇ ಹೀಗೆ ಸುಳ್ಳು ಆರೋಪ ಮಾಡುವುದನ್ನು ಬಿಡಿ. ಶಾಸ್ತ್ರಿ ಭವನದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಯಾವುದೇ ಫೈಲ್‍ಗಳಿಗೂ ಹಾನಿಯಾಗಿಲ್ಲ. ಮೇಲಿನ ಮಹಡಿಯಲ್ಲಿ ಇಟ್ಟಿದ್ದ ಬೇಡದ ವಸ್ತುಗಳಿಗೆ ಬೆಂಕಿ ತಗುಲಿತ್ತು. ಅದನ್ನು ಕೇವಲ 30 ನಿಮಿಷದೊಳಗೆ ನಂದಿಸಲಾಗಿದೆ. ಬೇರೆ ಅವರ ಮೇಲೆ ಆರೋಪ ಮಾಡುವ ಮೊದಲು ನಿಮ್ಮ ಕೆಲಸ ಮಾಡಿ. ಕಾಂಗ್ರೆಸ್‍ನಿಂದ ಇನ್ನೊಂದು ಸುಳ್ಳು ಹೊರಬಂದಿದೆ ಎಂದು ರೀಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಲೋಕಸಭಾ ಚುನಾವಣಾ ಪ್ರಚಾರ ವೇಳೆ “ಚೌಕಿದಾರ್ ಚೋರ್ ಹೇ” ಎಂದ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಾಗಿತ್ತು. ಈ ಬಗ್ಗೆ ರಾಹುಲ್ ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆಯನ್ನು ಕೂಡ ಕೇಳಿದ್ದರು. ಅಲ್ಲದೆ ರಫೆಲ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ.

ದೆಹಲಿಯಲ್ಲಿ ಇರುವ ಶಾಸ್ತ್ರಿ ಭವನ ಸರ್ಕಾರದ ಪ್ರಮುಖ ಸಚಿವಾಯಲಗಳನ್ನು ಹೊಂದಿದೆ. ಇಲ್ಲಿ ಕಾನೂನು ಸಚಿವಾಲಯ, ಮಾಹಿತಿ ಮತ್ತು ಪ್ರಸಾರ, ಕಾರ್ಪೊರೇಟ್ ವ್ಯವಹಾರಗಳು, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್, ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗಳ ಸಚಿವಾಲಯಗಳಿವೆ. ಈ ಕಟ್ಟಡದ 6ನೇ ಮಹಡಿಯಲ್ಲಿ ಇದ್ದ ವೇಸ್ಟ್ ವಸ್ತುಗಳಿಗೆ ಬೆಂಕಿ ತಗುಲಿದೆ. ಈ ಬೆಂಕಿ ಅವಘಡ ನಡೆಯಲು ನಿಖರ ಕಾರಣವೇನು ಎಂದು ತಿಳಿದುಬಂದಿಲ್ಲ.

Comments

Leave a Reply

Your email address will not be published. Required fields are marked *