ಸಲ್ಮಾನ್ ತಂಗಿ ಮನೆಯಲ್ಲಿ ಕಳ್ಳತನ : ಸಿಕ್ಕಿಬಿದ್ದ ಕಳ್ಳ

ಬಾಲಿವುಡ್ (Bollywood) ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಸಹೋದರಿಯ ಮನೆಯಲ್ಲಿ ಕಳ್ಳತನವಾಗಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಮನೆಯಲ್ಲಿ ಚಿನ್ನಾಭರಣ ಕಳುವಾದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಸಲ್ಮಾನ್ ಸಹೋದರಿ ಅರ್ಪಿತಾ ದೂರು ದಾಖಲಿಸಿದ್ದರು. ಅಲ್ಲದೇ, ದೂರಿನಲ್ಲಿ ಮನೆಗೆಲಸದ ವ್ಯಕ್ತಿಯ ಮೇಲೆ ಅನುಮಾನ ಇರುವ ಕುರಿತು ಉಲ್ಲೇಖಿಸಿದ್ದರು. ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.

ಅರ್ಪಿತಾ (Arpita) ಮನೆಯಲ್ಲಿ ವಜ್ರದ ಕಿವಿಯೋಲೆ ಸೇರಿದಂತೆ ಹಲವು ಆಭರಣಗಳು ಕಳುವಾಗಿದ್ದವು (Theft). ದೂರಿನಲ್ಲಿ ಉಲ್ಲೇಖ ಮಾಡಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅರ್ಪಿತಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಹೆಗ್ಡೆ ಎನ್ನುವವರನ್ನು ಪೊಲೀಸರು ಇದೀಗ ಬಂದಿಸಿದ್ದಾರೆ. ಆತನಿಂದ ಆಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್

ಸಂದೀಪ್ ಹೆಗ್ಡೆ (Sandeep Hegde) ಕಳೆದ ನಾಲ್ಕು ತಿಂಗಳಿಂದ ಅರ್ಪಿತಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಒಟ್ಟು ಹತ್ತು ಜನರು ಕೆಲಸ ಮಾಡುತ್ತಿದ್ದು, ಅವರಲ್ಲಿ ಸಂದೀಪ್ ಬಗ್ಗೆ ಅರ್ಪಿಯಾ ಅನುಮಾನ ವ್ಯಕ್ತ ಪಡಿಸಿದ್ದರು. ಸಿಸಿಟಿವಿ ಪರಿಶೀಲನೆ ಮಾಡಿದ ಬಳಿಕವೇ ಥಾಣೆ ಪೊಲೀಸರು (Thane Police) ಸಂದೀಪ್ ನನ್ನು ಬಂಧಿಸಿದ್ದಾರೆ. ಸಂದೀಪ್ ಒಟ್ಟು ನಾಲ್ಕು ಲಕ್ಷ ಮೌಲ್ಯದ ಆಭರಣವನ್ನು ಕಳ್ಳತನ ಮಾಡಿದ್ದನೆಂದು ತಿಳಿದು ಬಂದಿದೆ.

ಸಲ್ಮಾನ್ ದತ್ತು ಸಹೋದರಿ ಅರ್ಪಿತಾ ಬಾಲಿವುಡ್ ನಟ ಆಯುಷ್ ಶರ್ಮಾರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಸಲ್ಮಾನ್ ಗೆ ಅರ್ಪಿತಾ ಅಂದರೆ ಎಲ್ಲಿಲ್ಲದ ಪ್ರೀತಿ. ಸಹೋದರಿಯ ಹುಟ್ಟು ಹಬ್ಬಕ್ಕೆ ಪ್ರತಿ ಬಾರಿಯೂ ಬಾಲಿವುಡ್ ಸೆಲೆಬ್ರಿಟಿಗಳನ್ನು ಆಹ್ವಾನಿಸುವ ಸಂಪ್ರದಾಯವನ್ನು ಸಲ್ಮಾನ್ ಇಟ್ಟುಕೊಂಡಿದ್ದಾರೆ.