ಹೆಬ್ಬಾಳ ರುದ್ರಭೂಮಿಯಲ್ಲಿ ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಸೋಮವಾರ ಕೊನೆಯುಸಿರೆಳೆದಿದ್ದರು. ಇಂದು ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಹೆಬ್ಬಾಳದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

ತೆರೆದ ವಾಹನದಲ್ಲಿ ಮನೆಯಿಂದ ಹೆಬ್ಬಾಳ ರುದ್ರಭೂಮಿವರೆಗೆ ಪ್ರಕಾಶ್ ಅವರ ಪಾರ್ಥಿವ ಶರೀರವನ್ನು ತರಲಾಯಿತು. ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆ ಹೆಚ್ಚಿನ ಜನ ಸೇರಬಾರದು ಎಂಬ ನಿಯಮವಿದೆ. ಹೀಗಾಗಿ ಪೊಲೀಸರು ಅಂತ್ಯಸಂಸ್ಕಾರದಲ್ಲಿ ಪ್ರಕಾಶ್ ಕುಟುಂಬಸ್ಥರು ಮಾತ್ರ ಭಾಗಿಯಾಗಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಹೀಗಾಗಿ ರುದ್ರಭೂಮಿಯತ್ತ ಆಗಮಿಸಿದ್ದ ಅಭಿಮಾನಿಗಳನ್ನ ಪೊಲೀಸರು ತಡೆದಿದ್ದರು. ತಂದೆಯ ಅಂತಿಮ ಕಾರ್ಯವನ್ನು ಪುತ್ರ ರಕ್ಷಕ್ ನೆರವೇರಿಸಿದ್ದು, ಮಡಿವಾಳ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಯಿತು.

44 ವರ್ಷದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಲಿವರ್, ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಫಲಿಸದೆ ಸೋಮವಾರ ಮಧ್ಯಾಹ್ನ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್, ಸ್ಯಾಂಡಲ್‍ವುಡ್ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಕಾಣಿಸಿಕೊಂಡಿದ್ದರು.

Comments

Leave a Reply

Your email address will not be published. Required fields are marked *