ಬೆಂಗ್ಳೂರಲ್ಲಿ ಕಟ್ಟಡ ಕುಸಿತ ಪ್ರಕರಣ- ಇನ್ನೂ ಇಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ

ಬೆಂಗಳೂರು: ನಗರದ ಕಸವನಹಳ್ಳಿಯಲ್ಲಿ ಕಟ್ಟಡ ಕುಸಿತದ ಸ್ಥಳದಲ್ಲಿ ಎರಡು ದಿನಗಳಿಂದ ಅಗ್ನಿಶಾಮಕ ಹಾಗೂ ಎನ್‍ಡಿಆರ್‍ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಶುಕ್ರವಾರ ರಾಯಚೂರು ಮೂಲದ ರಾಜುಸಾಬ್ ಎಂಬ ಕಾರ್ಮಿಕನ ಮೃತ ದೇಹ ಪತ್ತೆಯಾಗಿತ್ತು. ಇದುವರೆಗೂ ಕಟ್ಟಡ ದುರಂತದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಒಟ್ಟು 16 ಮಂದಿ ಗಾಯಗೊಂಡಿದ್ದವರನ್ನು ರಕ್ಷಣೆ ಮಾಡಲಾಗಿದೆ.

ಒಟ್ಟು ಕಟ್ಟಡದಲ್ಲಿ 22 ಮಂದಿ ಕೆಲಸ ಮಾಡುತ್ತಿದ್ದರು ಅಂತ ಪೊಲೀಸರು ತಿಳಿಸಿದ್ದಾರೆ. ಕಟ್ಟಡ ಕಾರ್ಮಿಕರ ಮಾಹಿತಿ ಪ್ರಕಾರ ಇನ್ನೂ ಇಬ್ಬರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೆಳ್ಳಂದೂರು ಪೊಲೀಸರು 304 ಅಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಪ್ರ್ರಕರಣದ ಪ್ರಮುಖ ಆರೋಪಿ ಹಾಗೂ ಕಟ್ಟಡದ ಮಾಲೀಕ ರಫಿಕ್ ಪರಾರಿಯಾಗಿದ್ದಾನೆ. ಆದರೆ ರಫಿಕ್ ಪತ್ನಿ ಸಮೀರಾ ಹಾಗೂ ಬಿಬಿಎಂಪಿಯ ಮಹಾದೇವಪುರ ವಲಯದ ಉಪ ಅಭಿಯಂತರ ಮುನಿರೆಡ್ಡಿ ವಶಕ್ಕೆ ಪಡೆದಿರೋ ಬೆಳ್ಳಂದೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಏನಾಗಿತ್ತು?: ಕಳೆದ ಐದು ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಾಣ ಕೆಲಸ ಆರಂಭವಾಗಿದ್ದು, ಅನಂತರದಲ್ಲಿ ಕಾರಣಾಂತರಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಕಳೆದ ಇಪ್ಪತ್ತು ದಿನ ಹಿಂದೆಯಷ್ಟೇ ಕಟ್ಟಡ ನವೀಕರಣ ಕೆಲಸವನ್ನು ಆರಂಭ ಮಾಡಲಾಗಿತ್ತು. ಗುರುವಾರ ಈ ಕಟ್ಟಡ ಕುಸಿದು ಬಿದ್ದಿದ್ದು 7 ಜನರನ್ನು ರಕ್ಷಣೆ ಮಾಡಲಾಗಿತ್ತು.

ಘಟನಾಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಮಾತನಾಡಿದ ಅವರು ಸದ್ಯ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗುವುದು. ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಲಾಗುತ್ತದೆ ಹಾಗೂ ಮೃತರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಈ ವೇಳೆ ಮಾತನಾಡಿದ ಮೇಯರ್ ಸಂಪತ್ ರಾಜ್ ಇದು ಹಳೇ ಕಟ್ಟಡವಾಗಿದ್ದು, 5 ವರ್ಷದ ಹಿಂದೆ ನಿರ್ಮಾಣವಾಗಿತ್ತು. ಕಳಪೆ ಫೌಂಡೇಶನ್ ಕಾರಣ ಕಟ್ಟಡ ಕುಸಿದಿರುವ ಸಾಧ್ಯತೆ ಇದೆ ಅಂತ ಹೇಳಿದ್ದರು.

Comments

Leave a Reply

Your email address will not be published. Required fields are marked *