ಮುಡಾ ಸೈಟ್‌ಗಾಗಿ ನಾನು ಕಟ್ಟಿರುವ 3,000 ರೂ. ಸಾಂಕೇತಿಕ ಮೊತ್ತ: ಬಿಲ್ಡರ್ ಮಂಜುನಾಥ್ ಸ್ಪಷ್ಟನೆ

– ಕೋರ್ಟ್ ಆದೇಶದಂತೆ ಪರಿಹಾರವಾಗಿ ಸೈಟ್ ಪಡೆದಿದ್ದೇನೆ

ಮೈಸೂರು: ಮುಡಾ ಸೈಟ್ (MUDA Site) ಅಕ್ರಮ ಹಗರಣದಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಬಿಲ್ಡರ್ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ಮುಡಾ ಸೈಟ್‌ಗಾಗಿ ನಾನು ಕಟ್ಟಿರುವ 3,000 ರೂಪಾಯಿ ಸಾಂಕೇತಿಕ ಮೊತ್ತ ಎಂದು ತಿಳಿಸಿದ್ದಾರೆ.

ತಮ್ಮ ಮೇಲಿನ ಆರೋಪಗಳ ಬಗ್ಗೆ ಮೊದಲ ಬಾರಿಗೆ ಸ್ಪಷ್ಟೀಕರಣ ಕೊಟ್ಟಿರುವ ಅವರು, ಪ್ರಾಧಿಕಾರಕ್ಕೆ ನಾನು ಕಟ್ಟಿರುವುದು 3,000 ರೂ. ಸಾಂಕೇತಿಕವಾದ ಮೊತ್ತ. ಪರಿಹಾರ ರೂಪದಲ್ಲಿ ಪ್ರಾಧಿಕಾರದಿಂದ ನಿವೇಶನ ಪಡೆಯುವಾಗ ಸಾಂಕೇತಿಕವಾಗಿ ಅಷ್ಟೇ ಹಣ ನೀಡುವ ನಿಯಮ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಡ್ಲೆಪುರಿಗಿಂತಲೂ ಕಡೆಯಾಯ್ತು ಮೈಸೂರಿನ ಸೈಟ್‌ಗಳು – ಕೇವಲ 3 ಸಾವಿರಕ್ಕೆ 60*40 ಸೈಟ್ ಬರೆದುಕೊಟ್ಟ ಮುಡಾ

ನಾನು ಜಿಪಿಐ ಮಾಡಿಕೊಂಡಿದ್ದ ಜಮೀನಿನಲ್ಲಿ ಬಡಾವಣೆ ಮಾಡಿದ್ದೆ. ಅದರಲ್ಲಿ ಒಳಚರಂಡಿಗೆ ಬಹಳಷ್ಟು ಜಮೀನನ್ನು ಮುಡಾ ಬಳಸಿಕೊಂಡಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯಾಲಯದ ಆದೇಶದಂತೆ ಪರಿಹಾರವಾಗಿ ಸೈಟ್ ಪಡೆದಿದ್ದೇನೆ. ಕೆಲವರು ಪ್ರಚಾರಕ್ಕಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ದಟ್ಟಗಳ್ಳಿಯಲ್ಲಿ ನಾವು ಭೂಮಿ ಕಳೆದುಕೊಂಡಿದ್ದೆವು. ಅದಕ್ಕೆ ವಿಜಯನಗರದ ನಾಲ್ಕನೆ ಹಂತದಲ್ಲಿ ಸೈಟ್ ಕೊಡಲಾಗಿದೆ. ಬಡಾವಣೆ ಮಾಡುವಾಗ ನಮಗೆ ಶೇ.58 ರಷ್ಟು ಸೈಟ್‌ಗಳು ಸಿಗಬೇಕಿತ್ತು. ಆದರೆ ಸಿಕ್ಕಿದ್ದು, ಶೇ.38 ರಷ್ಟು ಮಾತ್ರ. ಹೀಗಾಗಿ, ಆ ಭೂಮಿಗೆ ಪ್ರಾಧಿಕಾರ 23 ಸೈಟ್ ಪರಿಹಾರವಾಗಿ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಐದು ದಿನದಲ್ಲಿ 23 ಸೈಟ್ ಪಡೆದ ವಿಚಾರದ ಬಗ್ಗೆ ಕಾರ್ತಿಕ್ ಬಡಾವಣೆಯ ಮಂಜುನಾಥ್ ಸ್ಪಷ್ಟೀಕರಣ ನೀಡಿದ್ದಾರೆ. ಇದನ್ನೂ ಓದಿ: EXCLUSIVE: ಮುಡಾ ಕೇಸ್; 13 ವರ್ಷದಲ್ಲಿ 4,921 ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ