Budget 2022: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ನೆರವು

ನವದೆಹಲಿ: ಸಂಸತ್‌ನಲ್ಲಿ ಮಂಗಳವಾರ ಮಂಡಿಸಲಾದ 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಭಾರತವು ನೆರೆ ರಾಷ್ಟ್ರಗಳಿಗೆ ಆರ್ಥಿಕ ನೆರವು ಘೋಷಿಸಿದೆ.

ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಮ್ಯಾನ್ಮಾರ್‌ ದೇಶಕ್ಕೆ 600 ಕೋಟಿ ರೂ. ಘೋಷಿಸಲಾಗಿದೆ. ಮ್ಯಾನ್ಮಾರ್‌ 2021ರಿಂದಲೂ ಮಿಲಿಟರಿ ದಂಗೆಯಿಂದ ತತ್ತರಿಸಿ ಹೋಗಿದೆ. ಭೂತಾನ್‌ಗೆ ಅತಿ ಹೆಚ್ಚು ಅಂದರೆ, 2,266.24 ಕೋಟಿ ರೂ. ನೆರವು ನೀಡಲಾಗುತ್ತಿದೆ. ಅಂತೆಯೇ ಮಾರಿಷಸ್‌ಗೆ 900 ಕೋಟಿ, ಆಫ್ರಿಕಾ ಖಂಡಕ್ಕೆ 250 ಕೋಟಿ ರೂ. ಬಾಂಗ್ಲಾದೇಶಕ್ಕೆ 300 ಕೋಟಿ ಮತ್ತು ನೇಪಾಳಕ್ಕೆ 750 ಕೋಟಿ ರೂ. ನೆರವು ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: Budget 2022: ಯಾವುದು ಇಳಿಕೆ? ಯಾವುದು ಏರಿಕೆ?

ಭಾರತವು ಕಾಬೂಲ್‌ನಲ್ಲಿ ರಾಜತಾಂತ್ರಿಕ ಉಪಸ್ಥಿತಿಯನ್ನು ಹೊಂದಿಲ್ಲ ಎಂಬುದು ಗಮನಾರ್ಹ. ಕಳೆದ ವರ್ಷದ ಆಗಸ್ಟ್‌ನಲ್ಲಿ ತಾಲಿಬಾನ್‌ ಅಧಿಕಾರ ವಹಿಸಿಕೊಂಡ ನಂತರ ಅದರ ರಾಯಭಾರಿ ಕಚೇರಿಯನ್ನು ಮುಚ್ಚಲಾಗಿದೆ. ಅಫ್ಘಾನಿಸ್ತಾನ ಕಳೆದೆರಡು ದಶಕಗಳಲ್ಲಿ ಭಾರತದ ಅನುದಾನವನ್ನು ಸ್ವೀಕರಿಸುತ್ತಿದೆ. ಕಳೆದ ವರ್ಷ ಅಫ್ಘಾನ್‌ ಅಧ್ಯಕ್ಷರಾಗಿದ್ದ ಅಶ್ರಫ್‌ ಘನಿ ಸರ್ಕಾರವು ಸುಮಾರು 348 ಕೋಟಿ ರೂ. ನೆರವು ಸ್ವೀಕರಿಸಿದೆ. ಈ ನೆರವು ಅಲ್ಲಿನ ಅಭಿವೃದ್ಧಿ ಯೋಜನೆಗಳ ಮೇಲೆ ಕೇಂದ್ರೀಕರಿಸಿದೆ.

ಈಚೆಗಷ್ಟೇ ಭಾರತವು ಅಫ್ಘಾನಿಸ್ತಾನಕ್ಕೆ ಔಷಧ ಮತ್ತು ಮಾನವೀಯ ನೆರವು ನೀಡಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋಧಿಯನ್ನು ಕಾಬೂಲ್‌ಗೆ ರವಾನಿಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ

Comments

Leave a Reply

Your email address will not be published. Required fields are marked *