ಕೇಂದ್ರ ಬಜೆಟ್: ಯಾವುದು ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪೂರ್ಣ ಮಾಹಿತಿ

ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ 2018ನೇ ಸಾಲಿನ ಕೇಂದ್ರ ಬಜೆಟ್ ಇಂದು ಮಂಡಿಸಿದ್ದು, ಅಬಕಾರಿ ಸುಂಕವನ್ನು ಏರಿಸಿದ ಕಾರಣ ಕೆಲವು ಆಮದುಗೊಂಡ ಉತ್ಪನ್ನಗಳ ಬೆಲೆ ಏರಿಕೆಯಾಗಲಿದ್ದು, ಮತ್ತಷ್ಟು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.

ಆಮದು ಮಾಡಿಕೊಳ್ಳಲಾಗುವ ಮೊಬೈಲ್ ಫೋನ್, ಟಿ.ವಿ ಸೆಟ್, ಡಿಜಿಟಲ್ ಕ್ಯಾಮೆರಾಗಳು, ಮೈಕ್ರೋವೇವ್ ಓವೆನ್, ಎಲ್‍ಇಡಿ ಬಲ್ಬ್ ಗಳು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗಲಿದೆ.

ಮೊಬೈಲ್ ಫೋನ್ ಮೇಲಿನ ಅಬಕಾರಿ ಸುಂಕವನ್ನು 15% ನಿಂದ 20% ಗೆ ಏರಿಸಲಾಗಿದೆ. ಅಲ್ಲಿಗೆ ಆ್ಯಪಲ್ ಐಫೋನ್‍ಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದ್ದು, ಭಾರತದಲ್ಲೇ ಉತ್ಪಾದಿಸುವ ಮೊಬೈಲ್ ಫೋನ್‍ಗಳ ಬೆಲೆಗೆ ಅಂತರ ಹೆಚ್ಚಲಿದೆ.

ತಜ್ಞರ ಪ್ರಕಾರ ಐಫೋನ್ ದರದ ಮೇಲೆ 2ರಿಂದ 3 ಸಾವಿರ ರೂ. ಹೆಚ್ಚಾಗಲಿದೆ. ಉದಾಹರಣೆಗೆ ಐಫೋನ್ ಎಕ್ಸ್ ಮಾಡಲ್‍ನ ಫೋನ್ ಈಗ 89 ಸಾವಿರ ರೂ. ಇದ್ದು, ಕಂಪೆನಿ ತೆರಿಗೆ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿದ್ರೆ ಫೋನ್ ಬೆಲೆ 92 ಸಾವಿರ ರೂ. ಗೆ ಏರಿಕೆಯಾಗುವ ಸಾಧ್ಯತೆಯಿದೆ.

ಟಿ.ವಿ ಸೆಟ್ ಬೆಲೆಗಳೂ ಕೂಡ ಏರಿಕೆಯಾಗಲಿದ್ದು, ಸ್ಕ್ರೀನ್ ಗಾತ್ರಕ್ಕೆ ಅನುಗುಣವಾಗಿ ಈಗಿರುವ ಬೆಲೆಗಿಂತ ಹೆಚ್ಚಾಗಲಿದೆ. 10 ಸಾವಿರ ರೂ. ಬೆಲೆಯ 20 ಲೀಟರ್ ಮೈಕ್ರೋವೇವ್ ಓವೆನ್ ಬೆಲೆ ಮೇಲೆ 500 ರೂ. ಹೆಚ್ಚಾಗುವ ಸಾಧ್ಯತೆಯಿದೆ. ಈ ಎಲ್ಲಾ ಬೆಲೆಗಳು ಅಂದಾಜು ಮೊತ್ತವಾಗಿದ್ದು ನಿರ್ದಿಷ್ಟ ಬೆಲೆ ಏರಿಕೆ ಎಷ್ಟೆಂದು ಸಂಸ್ಥೆಗಳು ಲೆಕ್ಕ ಮಾಡಬೇಕಿದೆ.

ಆಮದು ತೆರಿಗೆ ಹೆಚ್ಚಳದಿಂದಾಗಿ ಆ್ಯಪಲ್ ನಂತಹ ಸಂಸ್ಥೆಗಳು ಸ್ಥಳೀಯ ಉತ್ಪಾದನಾ ಯೋಜನೆಗಳ ವೇಗ ಹೆಚ್ಚಿಸಲಿದ್ದು, ಇದರಿಂದ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಪುಷ್ಟಿ ಸಿಕ್ಕಂತಾಗುತ್ತದೆ. ಹಾಗೂ ಸ್ಥಳೀಯ ಉತ್ಪಾದಕರಿಕೆ ಆಮದಿನಿಂದ ಹೆಚ್ಚಿನ ಸುರಕ್ಷತೆ ಸಿಕ್ಕಂತಾಗುತ್ತದೆ ಎಂದು ವರದಿಯಾಗಿದೆ.

ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. 2017ರ ಹಣಕಾಸು ವರ್ಷದಲ್ಲಿ ಭಾರತ ಸರಿಸುಮಾರು 42 ಬಿಲಿಯನ್ ಡಾಲರ್(ಅಂದಾಜು 2 ಲಕ್ಷ ಕೋಟಿ ರೂ.) ಮೌಲ್ಯದ ಟೆಲಿಕಾಮ್ ವಸ್ತುಗಳು, ಕಂಪ್ಯೂಟರ್ ಹಾರ್ಡ್‍ವೇರ್, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸಾಧನಗಳನ್ನ ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಇನ್ನು ಕಚ್ಛಾ ಗೋಡಂಬಿ ಮೇಲಿನ ತೆರಿಗೆ 5% ನಿಂದ 2.5 % ಗೆ ಇಳಿಕೆಯಾಗಿದೆ. ಅಂದ್ರೆ ಗೋಡಂಬಿ ಬೆಲೆ ಇಳಿಕೆಯಾಗಲಿದೆ.

Comments

Leave a Reply

Your email address will not be published. Required fields are marked *