ಯಡಿಯೂರಪ್ಪಗೆ ಹೃದಯಾಘಾತವಾಗಿದೆ ಎಂದು ವದಂತಿ- ಬಿಎಸ್‍ವೈ ಪ್ರತಿಕ್ರಿಯಿಸಿದ್ದು ಹೀಗೆ

ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಹೃದಯಾಘಾತವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಬಿಎಸ್‍ವೈ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲ ಸುಳ್ಳು ನಾನು ನಿಮ್ಮೆದುರು ನಿಂತಿದ್ದೇನೆ ನೋಡಿ ಎಂದು ಹೇಳಿದ್ದಾರೆ.

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಫಲಿತಾಂಶದ ಬಳಿಕ ಮೊದಲ ಪರಿವರ್ತನಾಯಾತ್ರೆಗೆ ಕೊಪ್ಪಳಕ್ಕೆ ಬಂದಿಳಿದ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ನೇರವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಾಗುತ್ತಿರುವ ಕೋಮುಗಲಭೆಗೆ ನೇರವಾಗಿ ರಾಜ್ಯ ಸರ್ಕಾರವೇ ಕಾರಣ. ಸಿದ್ದರಾಮಯ್ಯನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ್ರು. ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯಿಸಿ ಆಪರೇಷನ್ ಕಮಲ ಇಲ್ಲ. ಯಾರಾದ್ರೂ ಪಕ್ಷಕ್ಕೆ ಬರುವವರಿದ್ರೆ ಸ್ವಾಗತ ಮಾಡಿಕೊಳ್ಳುತ್ತೇವೆ ಎಂದ್ರು.

ಗುಜರಾತ್ ಮತ್ತು ಹಿಮಾಚಲಪ್ರದೇಶ ಚುನಾವಣೆ ಫಲಿತಾಂಶ ರಾಜ್ಯದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಶಕ್ತಿ ತಂದಿದೆ. ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಬಿಜೆಪಿ 6ನೇ ಬಾರಿಗೆ ಗುಜರಾತ್‍ನಲ್ಲಿ ಮತ್ತೆ ಅಧಿಕಾರ ಹಿಡಿದಿದ್ದು ಸಾಮಾನ್ಯ ಮಾತಲ್ಲ. ದೇಶದಲ್ಲೇ ಸುದೀರ್ಘ ಅಧಿಕಾರ ಮಾಡಿದ ಹೆಗ್ಗಳಿಕೆ ಗುಜರಾತ್‍ನಲ್ಲಿ ಬಿಜೆಪಿ ಸರ್ಕಾರಕ್ಕಿದೆ. ಇವಿಎಂ ಬಗ್ಗೆ ಸಿದ್ದರಾಮಯ್ಯ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇವಿಎಂ ಇಂಪ್ಲಿಮೆಂಟೇಷನ್ ಆಗಿದ್ದು ರಾಜೀವ್ ಗಾಂಧಿ ಕಾಲದಲ್ಲಿ, ಕಾಂಗ್ರೆಸ್ ಸರ್ಕಾರವಿದ್ದಾಗ. ಸೋಲಿನ ಭೀತಿಯಿಂದ ಇವಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ 371 ಕಲಂ ಬಿಜೆಪಿಯವರು ವಿರೋಧಿಸಿದ್ರು ಎಂದು ಈ ಭಾಗದಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. 371 ಕಲಂ ಜಾರಿಯಾಗಲು ನಮ್ಮ ಪಾತ್ರ ಇದೆ ಎಂದು ಸ್ಪಷ್ಟಪಡಿಸಿದ್ರು.

Comments

Leave a Reply

Your email address will not be published. Required fields are marked *