ಬಿಜೆಪಿ ಕಚೇರಿ ಸಿಬ್ಬಂದಿಗೆ ಬಿಎಸ್‍ವೈ ವಾರ್ನಿಂಗ್ ನೀಡಿದ್ದು ಹೀಗೆ

ಬೆಂಗಳೂರು: ಪಕ್ಷದ ಒಳಗಿನ ಭಿನ್ನಮತದ ವಿಚಾರಗಳು ಹೊರಗಡೆ ಸೋರಿಕೆ ಆಗಲು ಪಕ್ಷದ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳೇ ಕಾರಣ ಎನ್ನುವ ನಿರ್ಧಾರಕ್ಕೆ ಬಂದಿರುವ ಬಿಎಸ್ ಯಡಿಯೂರಪ್ಪ ಈಗ ಎಲ್ಲ ಸಿಬ್ಬಂದಿಗೆ ವಾರ್ನಿಂಗ್ ನೀಡಿದ್ದಾರೆ.

ಪಕ್ಷದ ಮಾಹಿತಿ ಸೋರಿಕೆ ಮತ್ತು ಕಚೇರಿಯಲ್ಲಿದ್ದುಕೊಂಡು ಪಕ್ಷದ ವಿರುದ್ಧ ಕೆಲಸ ಮಾಡುವವರ ಬಗ್ಗೆ ನಿಗಾವಹಿಸಲಾಗುವುದು. ತಪ್ಪಿತಸ್ಥ ಎಂದು ಕಂಡುಬಂದರೆ 24 ಗಂಟೆಯೊಳಗಾಗಿ ಕಚೇರಿಯಿಂದಲೇ ಗೇಟ್ ಪಾಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

ಸಲಹೆ, ಸೂಚನೆ, ಏನೇ ಮಾಹಿತಿ ಸೋರಿಕೆ ಆದರೂ ರಾಜ್ಯಾಧ್ಯಕ್ಷನಾದ ನಾನೇ ಅದಕ್ಕೆ ಉತ್ತರದಾಯಿತ್ವನಾಗಿರಬೇಕಾಗುತ್ತದೆ. ಚುನಾವಣೆ ಸಮಯದಲ್ಲಿ ಪಕ್ಷದ ಕಾರ್ಯತಂತ್ರಗಳು ಇತರರ ಕೈಸೇರಿದರೆ ಭಾರೀ ಅಪಾಯವಿದೆ. ಈ ಎಲ್ಲ ವಿಚಾರಗಳನ್ನು ತಿಳಿದುಕೊಂಡು ಜಾಗೃತರಾಗಿ ಕೆಲಸ ಮಾಡಬೇಕೆಂದು ಬಿ.ಎಸ್. ಯಡಿಯೂರಪ್ಪ ಬಿಜೆಪಿ ಕಚೇರಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಚಿತ್ರದುರ್ಗ ಬರ ಪ್ರವಾಸ ಬಳಿಕ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮೇ 20 ಶನಿವಾರ ರಾತ್ರಿ ಬಿಎಸ್‍ವೈ ಸಭೆ ನಡೆಸಿ ಈ ಎಚ್ಚರಿಕೆ ನೀಡಿದ್ದಾರೆ. ಕಚೇರಿ ಸಿಬ್ಬಂದಿಗೆ ಯಾರಿಗೂ ಯಾವುದೇ ಮಾಹಿತಿ ನೀಡದಂತೆ ತಾಕೀತು ಮಾಡಿದ್ದಾರೆ.

ಈ ಹಿಂದೆ ಬಿಜೆಪಿ ಕಚೇರಿ ಸಿಬ್ಬಂದಿಯಿಂದಲೇ ಮಾಹಿತಿ ಸೋರಿಕೆಯಾಗುತ್ತದೆ ಎಂದು ಸುದ್ದಿ ಹಬ್ಬಿತ್ತು. ಮಾಹಿತಿ ಸೋರಿಕೆ ಆಧಾರದ ಮೇಲೆ ಕಚೇರಿಯ ಟೈಪಿಸ್ಟ್ ಆಗಿದ್ದ ಮಲ್ಲಿಕಾರ್ಜುನ ಎಂಬ ವ್ಯಕ್ತಿಯನ್ನು ಈ ಹಿಂದೆ ಮನೆಗೆ ಕಳುಹಿಸಲಾಗಿತ್ತು.

ಕೆಲ ದಿನಗಳ ಹಿಂದೆ 14 ವರ್ಷಗಳ ಕಾಲ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್ ಅವರು ತಮ್ಮ ಸ್ಥಾನಕ್ಕೆ ದಿಢೀರ್ ಆಗಿ ರಾಜೀನಾಮೆ ನೀಡಿದ್ದರು. ಕೇಶವ ಪ್ರಸಾದ್ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದರು.

Comments

Leave a Reply

Your email address will not be published. Required fields are marked *